ತುಮಕೂರು: ಜೆಡಿಎಸ್ ಮುಖಂಡ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಿಧಾನಸಭೆ ಅಧಿವೇಶನ ಪ್ರಾರಂಭಕ್ಕೂ ಮುನ್ನ ಕೋವಿಡ್ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮದ ಕಾರಣ ರೋಗಲಕ್ಷಣಗಳು ಇಲ್ಲದೇ ಇದ್ದರೂ ಶಾಸಕರು ಕೋವಿಡ್ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಸೋಂಕು ಇರುವುದನ್ನು ವೈದ್ಯರು ದೃಢಪಡಿಸಿದ್ದು, ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕು ದೃಢಪಟ್ಟ ಕಾರಣ ಕಳೆದ ಒಂದು ವಾರದಿಂದ ತನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದವರು, ಕೋವಿಡ್ ತಪಾಸಣೆಗೆ ಒಳಗಾಗುವಂತೆ ಹಾಗೂ ಹೋಂ ಕ್ವಾರಂಟೈನ್ ಪಾಲಿಸುವಂತೆ ಗೌರಿಶಂಕರ್ ಮನವಿ ಮಾಡಿದ್ದಾರೆ.
ಹುಟ್ಟುಹಬ್ಬದ ಆಚರಣೆ ರದ್ದು: ಗೌರಿಶಂಕರ್‌ಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ಸೆ.16ರಂದು ಅವರ ಹುಟ್ಟುಹಬ್ಬ ಆಚರಣೆಯನ್ನು ರದ್ದುಗೊಳಿಸಲಾಗಿದೆ. ಮುಖಂಡರು ಹಾಗೂ ಅಭಿಮಾನಿಗಳು ಸಹಕರಿಸುವಂತೆ ಕೋರಿರುವ ಅವರು, ಹುಟ್ಟುಹಬ್ಬದ ಬದಲಾಗಿ ಕಷ್ಟದಲ್ಲಿರುವವರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಸಹೋದರನೊಂದಿಗೆ ಹುಟ್ಟಹಬ್ಬ: ಕೋವಿಡ್‌ನಿಂದ ಗುಣಮುಖರಾದ ನಂತರ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದು, ನವೆಂಬರ್‌ನಲ್ಲಿ ತಮ್ಮ ಸಹೋದರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವೇಣುಗೋಪಾಲ್ ಅವರ ಹುಟ್ಟುಹಬ್ಬ ಇದ್ದು, ಆ ವೇಳೆ ತಾವು ಸಹ ಹುಟ್ಟಹಬ್ಬ ಆಚರಿಸಿಕೊಳ್ಳುವುದಾಗಿ ಶಾಸಕ ತಿಳಿಸಿದ್ದಾರೆ.
ನಾಳೆ ವಿಶೇಷ ಪೂಜೆ: ಶಾಸಕ ಡಿ.ಸಿ.ಗೌರಿಶಂಕರ್ ಅವರು ಶೀಘ್ರ ಗುಣಮುಖರಾಗುವಂತೆ ಕೋರಿ ಹಾಗೂ ಅವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ(ಸೆ.16) ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ದೇಗುಲಗಳಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.