ಕೊಪ್ಪಳ: ‘ತುಂಗಭದ್ರಾ ಜಲಾಶಯದಲ್ಲಿ 70 ವರ್ಷಗಳಲ್ಲಿ ಮೊದಲ ಬಾರಿಗೆ ಗೇಟ್ ತುಂಡಾಗಿದ್ದು, 50 ವರ್ಷಗಳಿಗೊಮ್ಮೆ ಗೇಟ್ ಹಾಗೂ ಸರಪಳಿ ಬದಲಾಯಿಸಬೇಕಾಗಿತ್ತು ಎಂದು ತಜ್ಞರು ತಿಳಿಸಿದ್ದಾರೆ. ಇನ್ನು ಮುಂದೆ ಅವರ ಸಲಹೆಯಂತೆ ತುಂಗಭದ್ರಾ ಮಂಡಳಿ ಹಾಗೂ ಸಂಬಂಧಪಟ್ಟ ಮೂರೂ ರಾಜ್ಯ ಸರ್ಕಾರಗಳು ಈ ಕುರಿತು ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲ್ಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋದ 19 ಗೇಟ್ ಸ್ಥಳವನ್ನು ಮಂಗಳವಾರ ಪರಿಶೀಲಿಸಿ ಅಧಿಕಾರಿಗಳ ಜೊತೆ ಚರ್ಚಿಸಿದರು. ಜಲಾಶಯ ಗೇಟ್‌ಗಳ ನಿರ್ಮಾಣ ಮತ್ತು ಸುರಕ್ಷತಾ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಜೊತೆ ಚರ್ಚಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಎಂ. ‘ರೈತರ ಮೊದಲ ಬೆಳೆಗೆ 90 ಟಿಎಂಸಿ ಅಡಿ ನೀರು ಬೇಕಾಗಿದ್ದು, ಜಲಾಶಯದ ನೀರನ್ನು ಬಿಡದೇ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ನೀರಿನ ಮಟ್ಟ ಕಡಿಮೆ ಮಾಡಲಾಗುತ್ತಿದ್ದು, ನಂತರವೂ 64 ಟಿಎಂಸಿ ಅಡಿ ನೀರು ಉಳಿಯುತ್ತದೆ. ಗೇಟ್ ದುರಸ್ತಿ ತ್ವರಿತವಾಗಿ ಮುಗಿಸಲು ಸೂಚಿಸಲಾಗಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದರು.
‘ಪ್ರಸ್ತುತ ತುಂಡಾಗಿರುವ ಗೇಟ್ ದುರಸ್ತಿಗಾಗಿ 50 ರಿಂದ 60 ಟಿಎಂಸಿ ಅಡಿ ನೀರು ಹೊರಗೆ ಬಿಡಬೇಕಾಗಿದೆ. ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 17ರ ಬಳಿಕ ಮತ್ತೆ ಮಳೆಯಾಗಲಿದೆ. ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದೆ. ಆಗ ನಾನೇ ಬಂದು ಬಾಗಿನ ಅರ್ಪಿಸುತ್ತೇನೆ’ ಎಂದು ತಿಳಿಸಿದರು.
‘ಮಂಡಳಿ ನಿರ್ವಹಣೆ ಯಾರ ಕೈಯಲ್ಲಿದೆ?
ಜಲಾಶಯದ ವಿಚಾರವನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದು, ಈ ವಿಷಯದಲ್ಲಿ ನಾನು ರಾಜಕಾರಣದ ಮಾತು ಆಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
‘ತುಂಗಭದ್ರಾ ಜಲಾಶಯದ ಸಂಪೂರ್ಣ ನಿರ್ವಹಣೆ ಜವಾಬ್ದಾರಿ ಜಲಾಶಯ ಮಂಡಳಿಯದ್ದಾಗಿದೆ. ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು, ಕೇಂದ್ರ ಜಲ ಆಯೋಗ, ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಬದಲು ವಿಶ್ಲೇಷಣೆ ಅಗತ್ಯ. ಆದ್ದರಿಂದ ಈ ವಿಷಯದನ್ನು ಯಾರನ್ನೂ ದೂಷಿಸುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.