ADVERTISEMENT

‘ಜ್ಞಾನಭಾರತಿ’ ಆವರಣದೊಳಗೆ ಸುರಂಗ ರಸ್ತೆ

ಚಂದ್ರಹಾಸ ಹಿರೇಮಳಲಿ
Published 21 ಸೆಪ್ಟೆಂಬರ್ 2024, 23:57 IST
Last Updated 21 ಸೆಪ್ಟೆಂಬರ್ 2024, 23:57 IST
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟಲು ವಿದ್ಯಾರ್ಥಿಗಳ ಹರಸಾಹಸ: ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟಲು ವಿದ್ಯಾರ್ಥಿಗಳ ಹರಸಾಹಸ: ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಾಹನಗಳ ದಟ್ಟಣೆ, ಅಪಘಾತ ಪ್ರಕರಣಗಳನ್ನು ತಪ್ಪಿಸಲು ಸುರಂಗ ರಸ್ತೆ (ಅಂಡರ್‌ ಪಾಸ್‌) ನಿರ್ಮಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಚಿಂತನೆ ನಡೆಸಿವೆ.

1,111 ಎಕರೆ ವಿಸ್ತೀರ್ಣ ಹೊಂದಿರುವ ಜ್ಞಾನಭಾರತಿ ಆವರಣದೊಳಗೆ ಹಲವು ರಸ್ತೆಗಳು ಹಾದು ಹೋಗುತ್ತವೆ. ಮೈಸೂರು ರಸ್ತೆ (ಜ್ಞಾನಭಾರತಿ ಮೆಟ್ರೊ ರೈಲು ನಿಲ್ದಾಣದ ಬಳಿ)–ಉಲ್ಲಾಳು ವೃತ್ತ ಸಂಪರ್ಕಿಸುವ ಮುಖ್ಯ ರಸ್ತೆ, ನಾಗರಭಾವಿ ಮುಖ್ಯ ವೃತ್ತದಿಂದ ಕಾನೂನು ಕಾಲೇಜು ಮೂಲಕ ಸಾಗುವ ರಸ್ತೆ, ಮಲ್ಲತ್ತಹಳ್ಳಿ ಸಂಪರ್ಕ ರಸ್ತೆ ಸೇರಿ ಹಲವು ರಸ್ತೆಗಳಿವೆ. 

ಈ ರಸ್ತೆಗಳಲ್ಲಿ ಬಸ್‌, ಲಾರಿ, ಕಾರು, ಬೈಕ್‌ ಸೇರಿದಂತೆ ಎಲ್ಲ ಬಗೆಯ ಭಾರಿ ಹಾಗೂ ಲಘು ವಾಹನಗಳು ಸಂಚರಿಸುತ್ತವೆ. ವಾಹನಗಳ ದಟ್ಟಣೆ ಸದಾ ಇರುತ್ತದೆ. ಜ್ಞಾನಭಾರತಿ ಆವರಣದಲ್ಲಿ ವಿಶ್ವವಿದ್ಯಾಲಯದ 47 ವಿಭಾಗಗಳಿವೆ. ಸ್ನಾತಕೋತ್ತರ, ಸ್ನಾತಕ, ಸಂಶೋಧನೆ ಸೇರಿ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅತಿಥಿ ಉಪನ್ಯಾಸಕರು, ಕಾಯಂ ಅಧ್ಯಾಪಕರು ಸೇರಿ ಒಂದು ಸಾವಿರದಷ್ಟು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಹಾಸ್ಟೆಲ್‌ಗಳೂ ಸೇರಿ ಒಟ್ಟು ಏಳು ಹಾಸ್ಟೆಲ್‌ಗಳು ಇವೆ. 

ADVERTISEMENT

ಕಾಲೇಜು ಆರಂಭವಾಗುವ ಸಮಯ, ಮುಕ್ತಾಯ ಸಮಯದಲ್ಲಿ ವಿದ್ಯಾರ್ಥಿಗಳ ದಟ್ಟಣೆಯೂ ಅಧಿಕವಾಗಿರುತ್ತದೆ. ಈ ಸಮಯದಲ್ಲಿ ತರಗತಿಗಳಿಗೆ ಹೋಗುವ ಆತುರ, ಕೆಲಸಕ್ಕೆ ಹಾಜರಾಗುವ ಧಾವಂತದಲ್ಲೇ ಬೋಧಕ–ಬೊಧಕೇತರ ಸಿಬ್ಬಂದಿಯೂ ರಸ್ತೆ ದಾಟುತ್ತಾರೆ. ಇದರಿಂದ ವಾರಕ್ಕೆ ಕನಿಷ್ಠ ಎರಡು, ಮೂರು ಅಪಘಾತಗಳು ಸಂಭವಿಸುತ್ತಲೇ ಇವೆ. ಆವರಣದ ಹಾಸ್ಟೆಲ್‌ನಲ್ಲಿದ್ದ ಗಣಿತ ವಿಭಾಗದ ವಿದ್ಯಾರ್ಥಿನಿ ಶಿಲ್ಪಾಶ್ರೀ ತರಗತಿಗೆ ಹಾಜರಾಗಲು ಹೊರಟಿದ್ದಾಗ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದು ಗಾಯಗೊಂಡು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಐದು ವರ್ಷಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಪಘಾತದಲ್ಲಿ ಗಾಯಗೊಂಡಿದ್ದಾರೆ. 

ಈ ಎಲ್ಲ ಬೆಳವಣಿಗೆಗಳ ನಂತರ ಜ್ಞಾನಭಾರತಿ ಆವರಣದ ಒಳಗೆ ಹಾದುಹೋಗುವ ಪ್ರಮುಖ ರಸ್ತೆಗಳನ್ನು ಸಂಪೂರ್ಣ ಬಂದ್‌ ಮಾಡಿ, ಆವರಣದ ಒಳಗೆ ಸುರಂಗ ರಸ್ತೆಗಳನ್ನು ನಿರ್ಮಿಸುವುದಕ್ಕಾಗಿ ವಿಶ್ವವಿದ್ಯಾಲಯ, ಸರ್ಕಾರದ ಮೊರೆ ಹೋಗಿದೆ. 

‘ವಿಶ್ವವಿದ್ಯಾಲಯದ ಒಳಗಿನ ರಸ್ತೆಗಳು ಅಪಾಯಕಾರಿಯಾಗಿವೆ. ಹೊಸದಾಗಿ ಕಾಲೇಜು ಸೇರಿದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ನಿತ್ಯ ಮಾಡುತ್ತಿದ್ದೇವೆ. ಸ್ವಲ್ಪ ಯಾಮಾರಿದರೂ ಜೀವಕ್ಕೆ ಅಪಾಯ. ಸುರಂಗ ರಸ್ತೆ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಹರೀಶ್‌.

- ಜ್ಞಾನಭಾರತಿ ಆವರಣದಲ್ಲಿ ಸುರಂಗ ಮಾರ್ಗ ನಿರ್ಮಿಸಿದರೆ ಅಪಘಾತ ಮುಕ್ತ ವಲಯವಾಗಲಿದೆ. ವಿದ್ಯಾರ್ಥಿಗಳಲ್ಲಿನ ಭಯವೂ ನಿವಾರಣೆಯಾಗಲಿದೆ
ಎಸ್‌.ಎಂ. ಜಯಕರ ಕುಲಪತಿ 
ಆವರಣದಲ್ಲಿ ವಿದ್ಯಾರ್ಥಿಗಳು ವೇಗವಾಗಿ ದ್ವಿಚಕ್ರವಾಹನ ಓಡಿಸುತ್ತಾರೆ. ಹಲವರು ಹೆಲ್ಮೆಟ್‌ ಧರಿಸುವುದಿಲ್ಲ. ಸುರಕ್ಷತೆಯ ಬಗ್ಗೆ ಅವರೂ ಗಮನ ನೀಡಬೇಕು
- ಪರಮೇಶ್‌ ಎ.ಎಂ ನಾಗರಿಕ ಮಲ್ಲತ್ತಹಳ್ಳಿ 

ರಾತ್ರಿ 9ರ ನಂತರ ಮೂರು ರಸ್ತೆ ಬಂದ್

ಅಪಘಾತ ತಪ್ಪಿಸಲು ವಿಶ್ವವಿದ್ಯಾಲಯ ಆಡಳಿತ ಹಲವು ಕ್ರಮಗಳನ್ನು ಕೈಗೊಂಡರೂ ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇವೆ. ಅಪಘಾತಗಳ ಹೆಚ್ಚಳದ ನಂತರ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಆವರಣದ ರಸ್ತೆಗಳನ್ನು ಬಂದ್‌ ಮಾಡಲಾಗುತ್ತಿದೆ. ಮೈಸೂರು ರಸ್ತೆ–ಉಲ್ಲಾಳು ವೃತ್ತ ಸಂಪರ್ಕಿಸುವ ಮುಖ್ಯ ರಸ್ತೆ ಮಾತ್ರ ತೆರೆದಿರುತ್ತದೆ. ಆದರೆ ಇಂತಹ ಕ್ರಮಗಳಿಂದ ಕಾಲೇಜು ಅವಧಿಯಲ್ಲಿ ನಡೆಯುತ್ತಿರುವ ಅಪಘಾತ ತಪ್ಪಿಸಲು ಸಾಧ್ಯವಾಗಿಲ್ಲ. ರಸ್ತೆಗಳನ್ನು ಬಂದ್‌ ಮಾಡದಂತೆ ರಾಜಕೀಯ ಒತ್ತಡವೂ ಇದೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಅಧಿಕಾರಿಗಳು. ವಿಶ್ವವಿದ್ಯಾಲಯದ ಆವರಣ ಹೊರತಾಗಿ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಹಲವು ಬಾರಿ ನಡೆಸಿದ ಪ್ರತಿಭಟನೆಗಳಿಗೂ ಫಲ ಸಿಕ್ಕಿರಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.