ಬೆಂಗಳೂರು: ಎಚ್‌ಎಎಲ್ ಅವಳಿ ಸೀಟರ್‌ಗಳ ಎಲ್‌ಸಿಎ ತೇಜಸ್ ಯುದ್ಧ ವಿಮಾನವನ್ನು ಬುಧವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ.
ಭಾರತೀಯ ವಾಯುಪಡೆಯ ತರಬೇತಿಯ ಅಗತ್ಯಗಳು ಮತ್ತು ಯುದ್ಧದ ಸಂದರ್ಭಗಳಲ್ಲೂ ಹೋರಾಟಕ್ಕೆ ಬಳಸುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ. ಸಮಕಾಲಿನ ತಂತ್ರಜ್ಞಾನ ಅವಳಿ ಸೀಟರ್‌ಗಳ ತೇಜಸ್ ಸರ್ವ ಋತುವಿನ ಬಹು ಉಪಯೋಗಿ 4.5 ತಲೆಮಾರಿನ ಹಗುರ ಶ್ರೇಣಿಯ ಯುದ್ಧ ವಿಮಾನ. ಇಂದು ಮೊದಲ ಯುದ್ಧ ವಿಮಾನ ಹಸ್ತಾಂತರಿಸಲಾಗಿದೆ ಎಂದು ಎಚ್‌ಎಎಲ್ ತಿಳಿಸಿದೆ.
ಕೆಲವೇ ಕೆಲವು ದೇಶಗಳು ಮಾತ್ರ ಈ ರೀತಿಯ ಸಾಮರ್ಥ್ಯದ ಯುದ್ಧ ವಿಮಾನವನ್ನು ತಯಾರಿಸಿ ತಮ್ಮ ವಾಯು ಸೇನೆಗಳ ಬತ್ತಳಿಕೆಗೆ ಸೇರಿಸಿದ್ದು, ಇದೀಗ ಆ ಸಾಲಿಗೆ ಭಾರತವೂ ಸೇರಿದೆ. ಭಾರತ ಸರ್ಕಾರದ ‘ಆತ್ಮ ನಿರ್ಭರ ಭಾರತ’ ಪ್ರಯತ್ನದ ಭಾಗವಾಗಿ ಅವಳಿ ಸೀಟರ್‌ಗಳ ತೇಜಸ್ ಅಭಿವೃದ್ಧಿ ಪಡಿಸಲಾಗಿದೆ.
‘ಇದೊಂದು ಐತಿಹಾಸಿಕ ದಿನ. ಅವಳಿ ಸೀಟರ್‌ಗಳ ಹಗುರ ಯುದ್ಧ ವಿಮಾನ ತಯಾರಿಸುವ ಮೂಲಕ ಮಹತ್ತರ ಸಾಧನೆ ಮಾಡಲಾಗಿದೆ. ವಾಯು ಪಡೆಯ ಪೈಲಟ್‌ಗಳು ಈ ಅವಳಿ ಸೀಟರ್‌ಗಳ ಎಲ್‌ಸಿಎಯಲ್ಲಿ ತರಬೇತಿ ಪಡೆಯುವುದರಿಂದ ಅತಿ ಬೇಗನೇ ಯುದ್ಧ ವಿಮಾನಗಳ ಹಾರಾಟ ನಡೆಸಲು ಸಾಧ್ಯವಾಗುತ್ತದೆ. ಅವಳಿ ಸೀಟರ್‌ಗಳ 18 ಯುದ್ಧ ವಿಮಾನಗಳಿಗೆ ಭಾರತೀಯ ವಾಯು ಪಡೆ ಬೇಡಿಕೆ ಸಲ್ಲಿಸಿದೆ. 2023–24 ರ ಸಾಲಿನಲ್ಲಿ ಒಟ್ಟು ಎಂಟು ವಿಮಾನಗಳನ್ನು ಹಸ್ತಾಂತರಿಸಲಾಗುವುದು’ ಎಂದು ಎಚ್‌ಎಎಲ್ ತಿಳಿಸಿದೆ.
ವಿಮಾನ ಹಸ್ತಾಂತರ ಕಾರ್ಯಕ್ರಮದಲ್ಲಿ ರಕ್ಷಣಾ ರಾಜ್ಯ ಸಚಿವ ಅಜಯ್ ಭಟ್, ವಾಯು ಸೇನೆ ಮುಖ್ಯಸ್ಥ ವಿ.ಆರ್.ಚೌಧರಿ, ಎಚ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್‌ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.