ADVERTISEMENT

₹42.17 ಕೋಟಿ ಬಾಕಿ ಪಾವತಿಗೆ ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು: ಶಂಕರ ಪಾಟೀಲ

ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 5:41 IST
Last Updated 2 ಅಕ್ಟೋಬರ್ 2021, 5:41 IST
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ   

ಬೆಂಗಳೂರು: ಕಳೆದ ಸಾಲಿನಲ್ಲಿ ರೈತರು ಪೂರೈಸಿದ ಕಬ್ಬಿನ ಬಾಬ್ತು ಏಳು ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಉಳಿಸಿಕೊಂಡಿರುವ ₹ 42.17 ಕೋಟಿ ಪಾವತಿಗೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎರಡು ದಿನಗಳ ಗಡುವು ನೀಡಿದ್ದಾರೆ.

ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಸಚಿವರು, ‘ಸೋಮವಾರ ಸಂಜೆಯ ಒಳಗಾಗಿ ಎಲ್ಲ ಕಾರ್ಖಾನೆಗಳೂ ರೈತರ ಬಾಕಿ ಮೊತ್ತವನ್ನು ಪಾವತಿ ಮಾಡಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕಬ್ಬು ಖರೀದಿಯ ಹಣ ಬಾಕಿ ಉಳಿಸಿಕೊಂಡಿರುವ ಏಳು ಸಕ್ಕರೆ ಕಾರ್ಖಾನೆಗಳ ಪೈಕಿ ವಿಜಯಪುರ ಜಿಲ್ಲೆ ಕಾರಜೋಳದ ಬಸವೇಶ್ವರ ಶುಗರ್ಸ್‌ ಮತ್ತು ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಕೋರ್‌ ಗ್ರೀನ್‌ ಶುಗರ್ಸ್‌ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದೆ. ನಿಗದಿತ ಗಡುವಿನೊಳಗೆ ಬಾಕಿ ಪಾವತಿಸದಿದ್ದರೆ ಉಳಿದ ಕಾರ್ಖಾನೆಗಳ ವಿರುದ್ಧವೂ ಕಾನೂನು ಕ್ರಮದ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ADVERTISEMENT

2021–22ನೇ ಹಂಗಾಮಿನಲ್ಲಿ ದೊರೆಯಬಹುದಾದ ಕಬ್ಬಿನ ಪ್ರಮಾಣ, ಸಕ್ಕರೆ ಕಾರ್ಖಾನೆಗಳು ರೈತರ ಜತೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದ, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ, ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ), ಎಥೆನಾಲ್‌ ಮತ್ತಿತರ ಉಪ ಉತ್ಪನ್ನಗಳ ಉತ್ಪಾದನೆ ಸೇರಿದಂತೆ ಹಲವು ವಿಷಯಗಳ ಕುರಿತು ಸಚಿವರು ಪ್ರಗತಿ ಪರಿಶೀಲನೆ ನಡೆಸಿದರು.

‘ಸಕ್ಕರೆ ಉದ್ಯಮದ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ, ರೈತರ ಹಿತರಕ್ಷಣೆ ನಮ್ಮ ಮೊದಲ ಆದ್ಯತೆ. ಸರ್ಕಾರದ ಕಾನೂನು ಮತ್ತು ನಿಯಮಗಳನ್ನು ಪಾಲಿಸಿಕೊಂಡು ಕಾರ್ಖಾನೆಗಳು ವಹಿವಾಟು ನಡೆಸಿದರೆ ಸರ್ಕಾರ ಪೂರ್ಣ ಬೆಂಬಲ ನೀಡುತ್ತದೆ’ ಎಂದು ಶಂಕರ ಪಾಟೀಲ ತಿಳಿಸಿದರು.

ಕಬ್ಬಿನ ಬಾಬ್ತು ಬಾಕಿ ವಿವರ

ಸಕ್ಕರೆ ಕಾರ್ಖಾನೆ; ಮೊತ್ತ (₹ ಕೋಟಿಗಳಲ್ಲಿ)

ಸೋಮೇಶ್ವರ ಎಸ್‌.ಎಸ್‌.ಕೆ. ಲಿಮಿಟೆಡ್‌, ಬೈಲಹೊಂಗಲ, ಬೆಳಗಾವಿ; 0.69

ಜಮಖಂಡಿ ಶುಗರ್ಸ್‌ ಲಿ., ಹಿರೆಪಾದಸಲಗಿ, ಜಮಖಂಡಿ; 1.05

ನಿರಾಣಿ ಶುಗರ್ಸ್‌ ಲಿ., ಮುಧೋಳ; 5.67

ಸಾಯಿಪ್ರಿಯಾ ಶುಗರ್ಸ್‌ ಲಿ., ಹಿಪ್ಪರಗಿ, ಬಾಗಲಕೋಟೆ; 4.15

ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆ ಲಿ; 2.09

ಬಸವೇಶ್ವರ ಶುಗರ್ಸ್‌ ಲಿ., ಕಾರಜೋಳ; 22.11

ಕೋರ್‌ ಗ್ರೀನ್‌ ಶುಗರ್ಸ್‌ ಅಂಡ್‌ ಫ್ಯೂಯಲ್ಸ್‌ ಪ್ರೈ. ಲಿ., ಶಹಾಪುರ; 6.41

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.