ಬೆಂಗಳೂರು: ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ‘ಹಿಟ್ಲರ್’ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ನೀಡಿರುವ ಹೇಳಿಕೆಯ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ‘ಚುನಾವಣೆಯಲ್ಲಿ ಒಂದು ವರ್ಗವನ್ನು ಓಲೈಸಲು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉದಯನಿಧಿ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.
‘ಸನಾತನ ಧರ್ಮ ಸರ್ವೇಜನ ಸುಖಿನೋಭವಂತು ಎಂದು ಹೇಳುತ್ತದೆ. ಮಾನವರು ಮಾತ್ರವಲ್ಲ ಸಕಲ ಜೀವಿಗಳೂ ಸುಖವಾಗಿರಲಿ ಎಂದು ಬಯಸುತ್ತದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಇಂತಹ ಧರ್ಮವನ್ನೇ ನಾಶ ಮಾಡಬೇಕು ಎಂಬ ಮಾತು ಪ್ರಜಾಪ್ರಭುತ್ವ ವಿರೋಧಿ’ ಎಂದು ಬೊಮ್ಮಾಯಿ ಹೇಳಿದರು.
‘ಉದಯನಿಧಿ ಹೇಳಿಕೆ ಬಗ್ಗೆ ಇಂಡಿಯಾ ಕೂಟದ ಮಿತ್ರ ಪಕ್ಷಗಳು ಗೊಂದಲದಲ್ಲಿವೆ. ಇಂಡಿಯಾ ಮಿತ್ರ ಕೂಟ ಅಧಿಕಾರದ ಆಸೆಗೆ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಭಾರತದ ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ’ ಎಂದರು.
ಇಂಡಿಯಾದ ಕೂಟದ ಪಾಲುದಾರಿಕೆ ಹೊಂದಿರುವ ಕಾಂಗ್ರೆಸ್‌ನ ನಿಲುವೇನು? ಉದಯನಿಧಿ ಹೇಳಿಕೆಯನ್ನು ಬೆಂಬಲಿಸುತ್ತದೆಯಾ? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಏನು ಹೇಳುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.