ಉಡುಪಿ: ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಅ. 24ರಿಂದ 26ರ ವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. 24ರಂದು ಬೆಳಿಗ್ಗೆ 10 ಗಂಟೆಗೆ ಯೋಗ ಗುರು ಬಾಬಾ ರಾಮ್‌ದೇವ್ ಅವರು ಸಮ್ಮೇಳನ ಉದ್ಘಾಟಿಸುವರು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 24ರಂದು ಬೆಳಿಗ್ಗೆ 9ಕ್ಕೆ ಶೋಭಾಯಾತ್ರೆ ನಡೆಯಲಿದೆ. ಮೂರೂ ದಿನ ಬೆಳಿಗ್ಗೆ 6ರಿಂದ 7 ಗಂಟೆಯವರೆಗೆ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಯೋಗ ತರಗತಿಗಳು ನಡೆಯಲಿವೆ. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದರು.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಭಾರತೀಯ ವಿದ್ವತ್ ಪರಿಷತ್‌ನ ಅಧ್ಯಕ್ಷ ಪ್ರೊ. ವೀರನಾರಾಯಣ ಪಾಂಡುರಂಗಿ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸುವರು ಎಂದು ವಿವರಿಸಿದರು.
ದರ್ಶನ್ ಜಾಮೀನು ಅರ್ಜಿ: ವಿಚಾರಣೆ 28ಕ್ಕೆ ಮುಂದೂಡಿಕೆ
ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಬಳ್ಳಾರಿ ಜೈಲು ಅಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ದರ್ಶನ್ ಪರ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ದರ್ಶನ್ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ಸಂಸ್ಥೆಯಲ್ಲಿ (ವಿಮ್ಸ್) ಸೋಮವಾರವಷ್ಟೇ (ಅ.21) ಎಂಆರ್‌ಐ ಸ್ಕ್ಯಾನ್ ಮಾಡಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವೆಂದು ತಿಳಿಸಿದ್ದಾರೆ. ಹೀಗಾಗಿ, ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಬೇಕು’ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ’ ಎಂದು ಬಳ್ಳಾರಿಯ ಕೇಂದ್ರ ಕಾರಾಗೃಹದ ಅಧಿಕಾರಿಗೆ ನಿರ್ದೇಶಿ
ಸಿತಲ್ಲದೆ, ಆಕ್ಷೇಪಣೆ ಸಲ್ಲಿಸುವಂತೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿತು. ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಲಾಗಿದೆ. ದರ್ಶನ್ ಪರ ಹೈಕೋರ್ಟ್ ವಕೀಲ ಎಸ್.ಸುನಿಲ್ ಕುಮಾರ್ ವಕಾಲತ್ತು ವಹಿಸಿದ್ದಾರೆ.
ಬಾಂಗ್ಲಾದ ಮೂವರು ವಲಸಿಗರ ಬಂಧನ
ಹಾಸನ: ನಗರದಲ್ಲಿ ನಕಲಿ ಆಧಾರ್ ಕಾರ್ಡ್‌ನೊಂದಿಗೆ ವಾಸಿಸುತ್ತಿದ್ದ ಬಾಂಗ್ಲಾದೇಶದ ಮೂವರು ಅಕ್ರಮ ವಲಸಿಗರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹಕ್ ಬಂಧಿತರು.ಕಟ್ಟಡ ನಿರ್ಮಾಣ ಕಾರ್ಮಿಕರಾಗಿರುವ ಮೂವರು, ನಗರದ 80 ಅಡಿ ರಸ್ತೆಯ ಗದ್ದೆಹಳ್ಳದಲ್ಲಿ ಜುಬೇರ್ ಮನೆಯಲ್ಲಿ ವಾಸವಾಗಿದ್ದರು.
‘ಪಶ್ಚಿಮ ಬಂಗಾಳದ ವಿಳಾಸದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದು, ಬೆಂಗಳೂರಿನ ಮೂಲಕ ನಗರಕ್ಕೆ ಬಂದಿದ್ದ ಅವರು, ಪಶ್ಚಿಮ ಬಂಗಾಳದವರೆಂದೇ ಹೇಳಿಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೆನ್ಷನ್ ಮೊಹಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆದಿದೆ.
ಕೊಡಗಿನಲ್ಲಿ ಸಿದ್ಧತೆ: ‘ಕೊಡಗು ಜಿಲ್ಲೆಯಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು, ಪ‍್ರತಿ ಠಾಣಾ
ವಾರು, ಅಸ್ಸಾಂ ಸೇರಿದಂತೆ ಹೊರರಾಜ್ಯದ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಲಾಗುವುದು. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.