ಉಡುಪಿ: ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಜಿಲ್ಲಾ ನ್ಯಾಯಾಲಯ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾದ ವಿದ್ಯಾರ್ಥಿನಿಯರು, ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ತನಿಖೆಗೆ ಸಹಕರಿಸಬೇಕು, ವಿಚಾರಣೆಗೆ ತಪ್ಪದೆ ಹಾಜರಾಗಬೇಕು ಹಾಗೂ ತಲಾ ₹20 ಸಾವಿರ ಮೌಲ್ಯದ ಬಾಂಡ್ ಸಲ್ಲಿಸಬೇಕು’ ಎಂಬ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದರು.
ಕಾಲೇಜಿನ ಆಡಳಿತ ಮಂಡಳಿಗೂ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆಡಳಿತ ಮಂಡಳಿ ವಿರುದ್ಧ ಮಲ್ಪೆ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದರು. ಆಡಳಿತ ಮಂಡಳಿಯ ಪರವಾಗಿ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದರು.
ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು, ‘ರಾಜಕೀಯ ಹೋರಾಟಗಳಲ್ಲಿ ರಾಜಕೀಯ ಮಾಡಿದರೆ ಸಹಿಸುತ್ತೇವೆ, ಹಿಂದುತ್ವದ ಪರವಾದ ಹೋರಾಟಗಳಲ್ಲಿ ರಾಜಕೀಯ, ತಮಾಷೆ ಹಾಗೂ ಉದಾಸೀನ ಮಾಡಿದರೆ ಸಹಿಸುವುದಿಲ್ಲ. ಮನಷ್ಯ ತಪ್ಪೆಸಗುವುದು ಸಹಜ. ಆದರೆ, ಉದ್ದೇಶಪೂರ್ವಕವಾಗಿ ಇಂಥ ಕೃತ್ಯ ನಡೆಸುವುದು ಅಪರಾಧ. ಪ್ರಕರಣದ ತನಿಖೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡದೇ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು’ ಎಂದರು.
ಖುಷ್ಬೂ ದಾರಿ ತಪ್ಪಿಸಿದ್ದಾರೆ: ‘ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಗಡಿಬಿಡಿಗೆ ಸಿಲುಕಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕಾಲೇಜಿನಲ್ಲಿ ರಹಸ್ಯ ಕ್ಯಾಮೆರಾ ಇದೆ ಎಂದು ಯಾರೂ ಆರೋಪಿಸಿಲ್ಲ. ಪ್ರಕರಣದಲ್ಲಿ ಖುಷ್ಬೂ ಅವರಿಗೆ ಮಾಹಿತಿ ನೀಡಿದವರು ವ್ಯವಸ್ಥಿತವಾಗಿ ಅವರ ದಾರಿ ತಪ್ಪಿಸಿದ್ದಾರೆ’ ಎಂದು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಆರೋಪಿಸಿದರು.
‘ಈ ವಿಚಾರದಲ್ಲಿ ಸರ್ಕಾರ ಮಕ್ಕಳಾಟ ಮಾಡಬಾರದು, ತನಿಖೆ ಸರಿದಾರಿಯಲ್ಲಿ ನಡೆದರೆ ಹೋರಾಟದ ಅಗತ್ಯವಿಲ್ಲ. ತನಿಖೆ ನಡೆಸಲು ಸ್ವಾತಂತ್ರ್ಯ ಕೊಡಿ; ಇಲ್ಲವಾದರೆ ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆ ಹೊಣೆ ವಹಿಸಿ’ ಎಂದು ಒತ್ತಾಯಿಸಿದರು.
ತನಿಖೆಗೆ ತಂಡ ರಚನೆ: ಪ್ರಕರಣವು ಮಹಿಳೆಯರಿಗೆ ಸಂಬಂಧಪಟ್ಟದ್ದಾಗಿರುವುದರಿಂದ ಹಿಂದಿನ ತನಿಖಾಧಿಕಾರಿಯನ್ನು ಬದಲಿಸಿ, ಮಹಿಳಾ ಪಿಎಸ್‌ಐ ನೇತೃತ್ವದ ತಂಡಕ್ಕೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಾಲೇಜಿನ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇರಲಿಲ್ಲ: ಖುಷ್ಬು
ಬಿಜೆಪಿ ಪ್ರತಿಭಟನೆ: ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ನಗರದಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ‘ವಿಡಿಯೊ ಚಿತ್ರೀಕರಣ ಮಾಡಿರುವ ಪ್ರಕರಣವನ್ನು ಗೃಹಸಚಿವರು ಮಕ್ಕಳಾಟ ಎಂದು ಕರೆದಿದ್ದಾರೆ. ಇದು ಮಕ್ಕಳಾಟ ವಲ್ಲ, ಹಿಂದೆ ಅವರ ಪುತ್ರ ಲಿಂಗ ಬದಲಾವಣೆ ಮಾಡಿಕೊಂಡಿದ್ದರಲ್ಲ, ಅದು ಮಕ್ಕಳಾಟ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.