ಬೆಂಗಳೂರು: ‘ಹಿಂದುಗಳ ವಿರುದ್ಧ ಬೆದರಿಕೆ ಹಾಗೂ ಕಿರಕುಳ ಸಾಮಾನ್ಯ ಎಂಬ ವಾತಾವರಣವನ್ನು ರಾಜ್ಯದಲ್ಲಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವು ಸೃಷ್ಟಿಸಿದೆ’ ಎಂದು ಬಿಜೆಪಿ ಆರೋಪಿಸಿದೆ.
ಉಡುಪಿಯ ಖಾಸಗಿ ನೇತ್ರ ಚಿಕಿತ್ಸಾಲಯ ಹಾಗೂ ನರ್ಸಿಂಗ್ ಹೋಂನ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇರಿಸಿದ್ದ ಮುಸ್ಲಿಂ ಯುವತಿಯರು ಹಿಂದು ಯುವತಿಯರ ವಿಡಿಯೊಗಳನ್ನು ದಾಖಲಿಸಿ ವಾಟ್ಸ್‌ಆ್ಯಪ್ ಮೂಲಕ ಹಂಚಿಕೊಂಡ ಪ್ರಕರಣ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಪ್ರಕರಣದ ವಿರುದ್ಧ ಧ್ವನಿ ಎತ್ತಿದವರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದೆ.
ಜಿಹಾದಿಗಳ ಸೂಚನೆ ಮೇರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಂದು ಸಹಪಾಠಿಗಳ ವೀಡಿಯೊಗಳನ್ನು ದಾಖಲಿಸಲು ರಹಸವಾಗಿ ಮೊಬೈಲ್ ಕ್ಯಾಮೆರಾ ಇರಿಸಿದ್ದನ್ನು ಪ್ರಶ್ನಿಸಿದ್ದ ಭಾರತೀಯ ಪ್ರಜೆಗಳ ವಿರುದ್ಧ ಪೊಲೀಸ್ ಬಲವನ್ನು ಬಳಸುತ್ತಿದೆ ಎಂದು ಆರೋಪಿಸಿದೆ.
ಇದನ್ನು ಓದಿ: ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ: 3 ವಿದ್ಯಾರ್ಥಿನಿಯರ ಅಮಾನತು
ಮುಸ್ಲಿಂ ಯುವತಿಯರ ಕೃತ್ಯದ ವಿರುದ್ಧ ಧ್ವನಿ ಎತ್ತಿದ ರಶ್ಮಿ ಅವರ ಮನೆಗೆ ರಾತ್ರಿ ವೇಳೆಯಲ್ಲಿ ಪೊಲೀಸರನ್ನು ಕಳುಹಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಅವರ ಪಾಲಕರಿಗೆ ಕಿರುಕುಳ ನೀಡುತ್ತಿದೆ. ಜತೆಗೆ ಪೊಲೀಸರು ಅನಗತ್ಯವಾಗಿ ನಿರಂತರ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಹಾಗಿದ್ದರೆ ಸಂವಿಧಾನಬಾಹಿರ ಸಂಘಟನೆಗಳಿಂದ ರಾಜ್ಯ ಸರ್ಕಾರಕ್ಕೆ ಯಾವುದಾದರೂ ಆದೇಶಗಳಿವೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಸಿದ್ದರಾಮಯ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಟ್ವೀಟ್‌ನಲ್ಲಿ ಬಿಜೆಪಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.