ಉಡುಪಿ: ಶನಿವಾರ ಬೆಳಗಿನ ಜಾವ 5.57ರ ಶುಭ ಮುಹೂರ್ತದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದರು. ಇದರೊಂದಿಗೆ ಪಲಿಮಾರು ಮಠದ ಪರ್ಯಾಯ ಕೊನೆಯಾಗಿ ಅದಮಾರು ಮಠದ ಪರ್ಯಾಯ ಪರ್ವ ಆರಂಭವಾಯಿತು.
ಪರ್ಯಾಯ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಆಗಮಿಸಿದ ಅದಮಾರು ಶ್ರೀಗಳು ಕನಕನ ಕಿಂಡಿ ಹಾಗೂ ನವಗ್ರಹ ಕಿಂಡಿಯಲ್ಲಿ ಕೃಷ್ಣನ ದರ್ಶನ ಪಡೆದರು. ಬಳಿಕ ಪಲಿಮಾರು ವಿದ್ಯಾಧೀಶ ಶ್ರೀಗಳು ಅಕ್ಷಯ ಪಾತ್ರೆ, ಸಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈ ನೀಡುವ ಮೂಲಕ ಪರ್ಯಾಯ ಅಧಿಕಾರವನ್ನು ಈಶಪ್ರಿಯ ತೀರ್ಥರಿಗೆ ಹಸ್ತಾಂತರಿಸಿದರು.
ಮುಂದಿನ 2 ವರ್ಷಗಳ ಕಾಲ ಕೃಷ್ಣನ ಪೂಜಾ ಕೈಂಕರ್ಯ ಹಾಗೂ ಕೃಷ್ಣ ಮಠದ ಸಂಪೂರ್ಣ ಆಡಳಿತ ಈಶಪ್ರಿಯ ತೀರ್ಥರಿಗೆ ಸೇರಿರುತ್ತದೆ.
ಪೀಠಾರೋಹಣಕ್ಕೂ ಮುನ್ನ ಅದಮಾರು ಶ್ರೀಗಳು ನಸುಕಿನಲ್ಲಿ ಕಾಪುವಿನ ದಂಡತೀರ್ಥದಲ್ಲಿ ಸ್ನಾನ ಮಾಡಿದರು. ಬಳಿಕ ಉಡುಪಿಯ ಜೋಡುಕಟ್ಟೆ ಮಂಟಪಕ್ಕೆ ಬಂದು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಪರ್ಯಾಯ ಮೆರವಣಿಗೆಯಲ್ಲಿ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಕೃಷ್ಣಮಠಕ್ಕೆ ಕರೆತರಲಾಯಿತು.
ಜಾನಪದ ಲೋಕ ಸೃಷ್ಟಿ: ಮೆರವಣಿಗೆಯಲ್ಲಿ ತುಳುನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಕಣ್ಮನ ಸೆಳೆದವು. ಕೋಲಾಟ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ 16 ಜಾನಪದ ಕಲಾ ಪ್ರಕಾರಗಳು ಜಾನಪದ ಲೋಕವನ್ನೇ ಸೃಷ್ಟಿಸಿದ್ದವು.
ಬೆಳಗಿನ ಜಾವದವರೆಗೂ ನಡೆದ ಮೆರವಣಿಗೆಯ ಸೊಬಗನ್ನು ಸಾರ್ವಜನಿಕರು ರಸ್ತೆಯ ಇಕ್ಕೆಲಹಾಗೂ ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು. ರಸ್ತೆಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು.
ಮೊದಲ ಪರ್ಯಾಯ ಪೂಜೆ: ಸರ್ವಜ್ಞ ಪೀಠಾರೋಹಣದ ಬಳಿಕ ಬೆಳಿಗ್ಗೆ 10ಕ್ಕೆ ಅದಮಾರು ಶ್ರೀಗಳು ಮೊದಲ ಪರ್ಯಾಯ ಮಹಾ
ಪೂಜೆ ನೆರವೇರಿಸಿದರು. ನಂತರ ಭಕ್ತರಿಗೆ ವಿಶೇಷ ಭೋಜನ ಉಣಬಡಿಸಲಾಯಿತು.
ಪರ್ಯಾಯ ದರ್ಬಾರ್: ಮಧ್ಯಾಹ್ನ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ‘ಚಿಕ್ಕಂದಿನಿಂದಲೂ ಉಡುಪಿಯ ಕೃಷ್ಣಮಠದ ಜತೆ ನಂಟಿದೆ. ಪರ್ಯಾಯ ಉತ್ಸವದಂತಹ
ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಸೌಭಾಗ್ಯ’ ಎಂದರು.
ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪುತ್ತಿಗೆ ಶ್ರೀಗಳ ಗೈರು
ಪರ್ಯಾಯ ಮೆರವಣಿಗೆ, ಸರ್ವಜ್ಞ ಪೀಠಾರೋಹಣ, ಅರಳು ಗದ್ದಿಗೆ ಕಾರ್ಯಕ್ರಮ ಸೇರಿದಂತೆ ಪರ್ಯಾಯ ಅವಧಿಯ ಕಾರ್ಯಕ್ರಮಗಳಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಗೈರು ಎದ್ದು ಕಾಣುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.