ADVERTISEMENT

ಶಿರೂರು ಸ್ವಾಮೀಜಿ ಬರೆದ ಪತ್ರ ಬಹಿರಂಗ

ಪಟ್ಟದ ದೇವರ ವಿಚಾರ: ಪೊಲೀಸರಿಗೆ ಬರೆದ ಪತ್ರ

​ಪ್ರಜಾವಾಣಿ ವಾರ್ತೆ
Published 28 ಜುಲೈ 2018, 19:30 IST
Last Updated 28 ಜುಲೈ 2018, 19:30 IST
ಶಿರೂರು ಶ್ರೀಗಳು
ಶಿರೂರು ಶ್ರೀಗಳು   

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ನಿಧನರಾಗುವುದಕ್ಕೂ ಮುನ್ನ ಪಟ್ಟದ ದೇವರ ವಿಚಾರವಾಗಿ ಪೊಲೀಸ್ ಇಲಾಖೆಗೆ ಬರೆದ ಪತ್ರವೊಂದು ಇದೀಗ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.‌

ಪತ್ರದಲ್ಲಿ ಏನಿದೆ?: ‘ಶಿರೂರು ಮಠದ ಪಟ್ಟದ ದೇವರನ್ನು ಆನಾರೋಗ್ಯದ ನಿಮಿತ್ತ ಅದಮಾರು ಮಠದ ಕಿರಿಯ ಯತಿಗಳ ಮೂಲಕ ಶ್ರೀಕೃಷ್ಣಮಠದಲ್ಲಿ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮಧ್ವಚಾರ್ಯರು ಅಷ್ಟಮಠದ ಯತಿಗಳಿಗೆ ಪ್ರತ್ಯೇಕ ಪಟ್ಟದ ದೇವರನ್ನು ನೀಡಿದ್ದು, ಶಿರೂರು ಮಠಕ್ಕೆ ಅನ್ನವಿಠಲ ಪಟ್ಟದ ದೇವರಾಗಿದೆ.

ಪ್ರಸ್ತುತ ನಾನು ಆರೋಗ್ಯವಾಗಿದ್ದು, ಪಟ್ಟದ ದೇವರನ್ನು ಪೂಜಿಸುವ ಸಾಮರ್ಥ್ಯ ಇರುವುದರಿಂದ ನನ್ನ ವಶಕ್ಕೆ ನೀಡಬೇಕೆಂದು ಕೇಳಿದಾಗ ಕೊಡುತ್ತಿಲ್ಲ. ದೇವರು ನನ್ನ ವಶಕ್ಕೆ ಸಿಗುವವರೆಗೂ ಉಪವಾಸ ವ್ರತ ನಡೆಸುತ್ತಿದ್ದೇನೆ. ದೇವರ ಪ್ರಸಾದ ಸ್ವೀಕರಿಸದೆ ಮುಂದೆ ಅನಾಹುತ ನಡೆದರೆ ಬಾಕಿ ಮಠಾಧೀಶರೇ ಜವಾಬ್ದಾರಿ ಎಂದು ಈ ಮೂಲಕ ತಿಳಿಸುತ್ತಿದ್ದೇನೆ’ ಎಂದು ಶಿರೂರು ಶ್ರೀಗಳು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರು.

ADVERTISEMENT

ಈ ಪತ್ರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಉಡುಪಿ ಎಸ್‌ಪಿ ಲಕ್ಷ್ಮಣ ನಿಂಬರಗಿ ‘ಜೂನ್‌ನಲ್ಲಿ ಶಿರೂರು ಶ್ರೀಗಳು ಉಡುಪಿ ನಗರ ಠಾಣೆಗೆ ಪತ್ರ ಬರೆದಿದ್ದು ನಿಜ. ಆದರೆ, ಪತ್ರದಲ್ಲಿರುವ ಅಂಶಗಳು ಸಿವಿಲ್‌ ವ್ಯಾಜ್ಯವಾಗಿರುವುದರಿಂದ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಅವರಿಗೆ ಆಗಲೇ ಹಿಂಬರಹ ರವಾನಿಸಲಾಗಿತ್ತು. ಈಗ ಹರಿದಾಡುತ್ತಿರುವುದು ಛಾಯಾಪ್ರತಿ’ ಎಂದು ಪ್ರತಿಕ್ರಿಯೆ ನೀಡಿದರು.

ಇದೇ ವೇಳೆ ಶಿರೂರು ಶ್ರೀಗಳ ಮರಣೋತ್ತರ ಪರೀಕ್ಷೆ ವರದಿ ಸೋಮವಾರ ಅಥವಾ ಮಂಗಳವಾರ ಬರುವ ಸಾಧ್ಯತೆ ಇದೆ. ಎಫ್‌ಎಸ್‌ಎಲ್‌ ವರದಿ ಬರಲು ತಡವಾಗಲಿದೆ ಎಂದು ಎಸ್‌ಪಿ ತಿಳಿಸಿದರು.

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.