ಗ್ರಾಹಕರಿಗೆವಿಶೇಷ ಹಬ್ಬದೂಟದ ಸವಿಯನ್ನು ಉಣಬಡಿಸಲು ನಗರದ ಹೋಟೆಲ್, ರೆಸ್ಟೋರೆಂಟ್‌ಗಳು ಬಾಯಲ್ಲಿ ನೀರೂರಿಸುವ ಭಕ್ಷ್ಯ, ಭೋಜನ ಗಳೊಂದಿಗೆ ಸಜ್ಜಾಗಿವೆ. ಮಾಲ್‌ಗಳು, ವಾಣಿಜ್ಯ ಮಳಿಗೆಗಳು ಗ್ರಾಹಕರಿಗೆ ಯುಗಾದಿ ಹಬ್ಬದ ನೈಜ ಅನುಭವ ಕಟ್ಟಿಕೊಡಲುತಳಿರು–ತೋರಣ, ಚಪ್ಪರ, ಬಾಳೆಕಂಬ, ಹೂವುಗಳಿಂದ ಶೃಂಗಾರಗೊಂಡಿವೆ.
ಸೀರೆ, ಬಟ್ಟೆ, ಚಿನ್ನಾಭರಣ, ಪೀಠೋಪ ಕರಣ, ವಾಚ್, ಗೃಹೋಪಯೋಗಿ ಸಲಕರಣೆ, ಎಲೆಕ್ಟ್ರಾನಿಕ್ಸ್ ಅಂಗಡಿಗಳು ಮತ್ತು ವಾಹನ ಮಾರಾಟ ಶೋ ರೂಂಗಳು ಪೈಪೋಟಿಯ ಮೇಲೆ ವಿಶೇಷ ರಿಯಾಯ್ತಿ ಮತ್ತು ಆಕರ್ಷಕ ಕೊಡುಗೆ ಘೋಷಿಸಿವೆ. ಬೆಂಗಳೂರು ಸುತ್ತಮುತ್ತಲಿನ ಗ್ರಾಮಸ್ಥರು ವಾಹನಗಳಲ್ಲಿಬೇವಿನ ಚಿಗುರು, ಮಾವಿನ ಕಾಯಿ ಮತ್ತು ತಳಿರುಗಳನ್ನು ಮಾರುಕಟ್ಟೆಗೆ ತಂದಿದ್ದು, ಎಲ್ಲಿಲ್ಲದ ಬೇಡಿಕೆ ಕುದುರಿದೆ.
ಬೇವಿನ ಚಿಗುರು, ಮಾವು ಮತ್ತು ಹೂವು ಖರೀದಿ ಭರಾಟೆ ಜೋರಾಗಿದೆ. ಮಲ್ಲೇಶ್ವರ, ಬಸವನಗುಡಿ, ಯಶವಂತಪುರ ಮಾರುಕಟ್ಟೆಗಳು ಬೆಂಗಳೂರಿನ ಗತ ವೈಭವ ನೆನಪಿಗೆ ತರುತ್ತಿವೆ. ಹೊಸ ವರ್ಷಯುಗಾದಿಯನ್ನು ಬರಮಾಡಿಕೊಳ್ಳಲುನಗರದ ಸಂಭ್ರಮ ಗರಿಗೆದರಿದೆ.
ಸಾಂಪ್ರದಾಯಿಕ ಭಕ್ಷ್ಯ ಭೋಜನ
ಬೆಂಗಳೂರಿನಲ್ಲಿ ಮೊದಲು ಯುಗಾದಿ ಹಬ್ಬದೂಟದ ಸಂಪ್ರದಾಯ ಆರಂಭಿಸದ ಮಲ್ಲೇಶ್ವರದ ‘ಹಳ್ಳಿ ಮನೆ’ ಈ ಯುಗಾದಿಗೆ 26 ಬಗೆಯ ಭಕ್ಷ್ಯಗಳನ್ನು ಉಣಬಡಿಸಲು ಸಜ್ಜಾಗಿದೆ. ಹಳ್ಳಿಯ ವಿಶಿಷ್ಟ ಸೊಬಗಿನ ಸಾಂಪ್ರದಾಯಿಕ ಶೈಲಿಯ ಹೆಂಚಿನ ಮನೆ ಮಾವು–ಬೇವಿನ ತಳಿರು ತೋರಣ, ಬಾಳೆದಿಂಡಿನ ಸ್ವಾಗತ ಕಮಾನುಗಳಿಂದ ಶೃಂಗಾರಗೊಂಡಿದೆ.
14 ವರ್ಷಗಳಿಂದ ಸಂಕ್ರಾಂತಿ, ಗಣೇಶ ಉತ್ಸವ ಮತ್ತು ಯುಗಾದಿ ಹಬ್ಬದಂದು ಹಳ್ಳಿಮನೆ ಬಡಿಸುತ್ತಿರುವ ಹಬ್ಬದೂಟದ ವೈವಿಧ್ಯಮಯ ಭಕ್ಷ್ಯಗಳು ಹೆಸರುವಾಸಿಯಾಗಿವೆ. ಕರಾವಳಿ ಮತ್ತು ಮಲೆನಾಡು ಶೈಲಿಯ ಶುದ್ಧ ಸಸ್ಯಾಹಾರಿ ಭಕ್ಷ್ಯ, ಸಿಹಿ ತಿಂಡಿ, ಕಜ್ಜಾಯಗಳು ಬಾಯಲ್ಲಿ ನೀರೂರಿಸುತ್ತವೆ. ಬೇವು–ಬೆಲ್ಲ ಸವಿಯುವುದರೊಂದಿಗೆಬಾಳೆಲೆಯಲ್ಲಿ ಊಟ ಆರಂಭವಾಗುತ್ತದೆ. ಮಾವಿನ ಹಣ್ಣಿನ ರಸಾಯನ, ಮಾವಿನಶುಂಠಿ ಪಾನಕ, ಮಾವಿನಕಾಯಿ ಚಿತ್ರಾನ್ನ,ಮಾವಿನ ಹಣ್ಣಿನ ಹೋಳಿಗೆ ಯುಗಾದಿ ಸಂಭ್ರಮವನ್ನು ಹೆಚ್ಚಿಸು ತ್ತವೆ.ಹಬ್ಬದೂಟ ತಯಾರಿ ಸಲು ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ವಿಶೇಷ ಬಾಣಸಿಗರನ್ನು ಕರೆಸಲಾಗಿದೆ.
ಒತ್ತಡದ ಯಾಂತ್ರಿಕ ಜೀವನದಲ್ಲಿ ಬದುಕುತ್ತಿರುವ ನಗರದ ಜನರಿಗೆ ಅಡುಗೆ ಮನೆಯಲ್ಲಿ ಸಮಯ ಕಳೆಯಲು ಪುರಸೊತ್ತು ಮತ್ತು ತಾಳ್ಮೆ ಎರಡೂ ಇಲ್ಲ. ಹೀಗಾಗಿ ನಮ್ಮ ಹೋಟೆಲ್‌ಗೆ ಬರುತ್ತಾರೆ. ವಿಶೇಷವೆಂದರೆ ಮುಸ್ಲಿಂ ಮತ್ತು ಕ್ರೈಸ್ತ ಕುಟುಂಬಗಳು ಕೂಡ ಹಬ್ಬದೂಟ ಸವಿಯಲು ಬರುತ್ತಾರೆ ಎನ್ನುತ್ತಾರೆ ಹೋಟೆಲ್ ಮಾಲೀಕ ನೀಲಾವರ ಸಂಜೀವ್‌ರಾವ್.
ದಕ್ಷಿಣ ಭಾರತದ ಊಟದ ರುಚಿ ಸವಿಯಲು ವಿದೇಶಿಯರು ಬರುತ್ತಾರೆ. ನಗರದ ಅನೇಕ ಕುಟುಂಬಗಳು ಯುಗಾದಿಯಂದು ಹೋಟೆಲ್‌ನಲ್ಲಿ ಹಾಜರಿರು ತ್ತವೆ ಎಂದು ಮ್ಯಾನೇಜರ್ ಶ್ರೀನಿವಾಸ ಹೇಳುತ್ತಾರೆ.
ಟೆಂಪಲ್ ಮೀಲ್ಸ್, ಅಯ್ಯರ್ ಮೆಸ್, ನಳಪಾಕ, ತೃಪ್ತಿ, ನಂದಿನಿ ಹೋಟೆಲ್, ಐಟಿಸಿ ವಿಂಡ್ಸರ್ ಮ್ಯಾನರ್, ಎಂಜಿಎಂ ಮಾರ್ಕ್, ಸೌತ್ ಇಂಡೀಸ್, ತಾಜ್ ಹೋಟೆಲ್‌ಗಳು ವಿಶೇಷ ಭಕ್ಷ್ಯ, ಭೋಜನಗಳೊಂದಿಗೆ ಸಜ್ಜಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.