ಕೂಡ್ಲಿಗಿ: ತಾಲ್ಲೂಕಿನ ಅನೇಕ ವಂಶಸ್ಥರಿಗೆ ಯುಗಾದಿ ಹಬ್ಬವೆಂದರೆ ಕರಾಳ ದಿನ.ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಅನೇಕ ಕುಟುಂಬಗಳಲ್ಲಿ ಕೆಲವು ತಲೆಮಾರುಗಳಿಂದಲೂ ಹಬ್ಬವನ್ನು ಆಚರಿಸುತ್ತಿಲ್ಲ. ಹಬ್ಬದ ದಿನ ಅವರ ಮನೆಗಳಲ್ಲಿ ಸೂತಕದ ಛಾಯೆ ಆವರಿಸುತ್ತದೆ.
ಕೂಡ್ಲಿಗಿ ಪಟ್ಟಣದ ಕಾವಲ್ಲಿ, ಗುಪ್ಪಾಲ್, ಭಂಗಿ, ಜಿಂಕಲ್, ಮತ್ತು ತಳವಾರ ಕುಟುಂಬಗಳ ಸೇರಿದಂತೆ 250ಕ್ಕೂ ಹೆಚ್ಚು ಕುಟುಂಬಗಳು ಹಬ್ಬವನ್ನು ಆಚರಿಸುವುದಿಲ್ಲ. ಅವರ ಜೊತೆಗೆ ತಾಲ್ಲೂಕಿನ ಅಗ್ರಹಾರ ದೊಡ್ಡಮನೆ ವಂಶಸ್ಥರು, ತಾಲ್ಲೂಕಿನ ವಿವಿಧ ಗ್ರಾಮಗಳ ಬಾರಿಕರು, ಉಪ್ಪಾರರ ಮನೆಗಳಲ್ಲೂ ಹಬ್ಬವಿಲ್ಲ.
ಇದು ಕೇವಲ ಹಬ್ಬ ಆಚರಣೆ ಮಾಡುವುದಿಲ್ಲ ಎನ್ನುವುದಷ್ಟೆ ಅಲ್ಲ. ಯುಗಾದಿ ಆರಂಭದ ದಿನವಾದ ಅಮಾವಾಸ್ಯೆಯಂದು ಮತ್ತು ಮಾರನೇ ದಿನ ಪಾಡ್ಯದಂದು ಈ ಮನೆಗಳಲ್ಲಿ ಯಾರು ಸ್ನಾನ ಕೂಡ ಮಾಡುವುದಿಲ್ಲ. ಪೂಜೆ ಪುನಸ್ಕಾರಗಳನ್ನೂ ಕೈಗೊಳ್ಳುವುದಿಲ್ಲ. ಹೊಸ ಬಟ್ಟೆಗಳ ಮಾತು ದೂರವಾಯಿತು. ಅಡುಗೆ ಮಾಡುವಾಗ ಸಾಂಬಾರಿಗೆ ವಗ್ಗರಣೆ ಹಾಕುವುದಿಲ್ಲ. ಮನೆಯಲ್ಲಿ ಹಪ್ಪಳ ಸೆಂಡಿಗೆ ಸೇರಿದಂತೆ ಯಾವುದೇ ತಿಂಡಿಗಳನ್ನು ಕರಿಯುವುದಿಲ್ಲ.
ಶತಮಾನದ ಹಿಂದೆ ಈ ಹಬ್ಬದ ಸಂದರ್ಭದಲ್ಲಿ ನಡೆದ ಅವಘಡಗಳು, ಅಪಶಕುನಗಳು ಈ ಹಬ್ಬವನ್ನು ಆಚರಣೆ ಮಾಡುವ ಸಂಪ್ರಾದಯವನ್ನು ಕೈ ಬಿಡುವಂತೆ ಮಾಡಿವೆ.
‘ಈ ರೀತಿಯ ಅನುಭವ ನಮಗೂ ಅಗಿದೆ’ ಎಂದು ಹೇಳುವ ವಾಲ್ಮೀಕಿ ಮುಖಂಡ ಗುಪ್ಪಾಲ್ ಕಾರಪ್ಪ, ‘ಪಟ್ಟಣದಲ್ಲಿ ಶೇ 70ರಷ್ಟು ವಾಲ್ಮೀಕಿ ಜನಾಂಗ ಈ ಹಬ್ಬ ಆಚರಣೆ ಮಾಡುತ್ತಿಲ್ಲ’ ಎನ್ನುತ್ತಾರೆ.
ಇದೇ ರೀತಿ ತಾಲ್ಲೂಕಿನ ಅಗ್ರಹಾರ ಗ್ರಾಮದ ದೊಡ್ಡ ಮನೆ ವಂಶಸ್ಥರು, ಗಜಾಪುರ ಗ್ರಾಮದಲ್ಲಿನ ಅನೇಕ ವಾಲ್ಮೀಕಿ ಮನೆತನಗಳು ಹಾಗೂ ಬಾರಿಕರ ವಂಶಸ್ಥರು ವಿವಿಧ ಕಾರಣಗಳಿಂದ ಯುಗಾದಿ ಹಬ್ಬ ಆಚರಿಸುವುದಿಲ್ಲ.ಎರಡು ದಿನಗಳ ಕಾಲ ಅವರ ಮನೆಯ ಯಾರೊಬ್ಬರೂ ಬೇವಿನ ಸೊಪ್ಪನ್ನು ಸಹ ಮುಟ್ಟುವುದಿಲ್ಲ.
ಹಬ್ಬ ಆಚರಿಸದ ಮನೆಗಳ ಯಾರೊಬ್ಬರೂ,ಗಜಾಪುರದಲ್ಲಿ ಯುಗಾದಿ ಪಾಡ್ಯದ ದಿನ ನಡೆಯುವ ಅಂಜನೇಯ ಸ್ವಾಮಿ ರಥೋತ್ಸವದಲ್ಲಿಪಾಲ್ಗೊಳ್ಳುವುದಿಲ್ಲ. ದೂರದಿಂದಲೇ ರಥವನ್ನು ನೋಡಿದರೂ ಕೈ ಮುಗಿಯುವುದಿಲ್ಲ.
‘ಯುಗಾದಿ ಹಬ್ಬದಂದು ಮಾವು, ಬೇವು ತರಲು ಹೋದವರು ಮರಳಿ ಮನೆಗೆ ಬಾರದ ಕಾರಣ ಯುಗಾದಿಯನ್ನು ನಮ್ಮ ವಂಶದಲ್ಲಿ ಆಚರಣೆ ಮಾಡುತ್ತಿಲ್ಲ ಎಂದು ನಮ್ಮ ತಾತ ಹೇಳುತ್ತಿದ್ದರು’ ಎಂದು ಗಜಾಪುರ ಗ್ರಾಮದ ಹಿರಿಯರಾದ ಬಾರಿಕಾರ ಕೊಟ್ರಪ್ಪ ಮಾಹಿತಿ ನೀಡಿದ್ದಾರೆ.
ಹಬ್ಬ ಆಚರಣೆ ಮಾಡುವ ಸ್ನೇಹಿತರು, ಹಿತೈಷಿಗಳು ತಮ್ಮ ಮನೆಯಲ್ಲಿ ಪೂಜೆ, ಪುನಸ್ಕಾರ ಮುಗಿದ ತಕ್ಷಣ ಹಬ್ಬ ಆಚರಣೆ ಮಾಡದೇ ಇರುವ ಕುಟುಂಬಗಳಿಗೆ ಬೇವು, ಬೆಲ್ಲ ಮಿಶ್ರಣ ಮಾಡಿದ ಪುಡಿಯನ್ನು ತಂದು ನೀಡುತ್ತಾರೆ. ಅದನ್ನು ತಿಂದ ನಂತರ ಕೆಲ ಕುಟುಂಬದವರು ಸ್ನಾನ ಪೂಜೆ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
*
ಈ ಹಿಂದೆ ಯುಗಾದಿ ದಿನವೇ ಅನೇಕ ಬಾರಿ ಮನೆಯಲ್ಲಿ ಸಾವು ನೋವುಗಳುಂಟಾಗಿದ್ದವು. ಹೀಗಾಗಿ ಹಬ್ಬ ಆಚರಿಸುವುದಿಲ್ಲ ಎಂದು ಹಿರಿಯರು ಹೇಳುತ್ತಿದ್ದರು.
-ಡೊಂಕಯ್ಯನವರ ಮಲಿಯಮ್ಮ, ಕೂಡ್ಲಿಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.