ADVERTISEMENT

‘ಅತಿಥಿ’ಗಳಿಗೆ ಯುಜಿಸಿ ತೂಗುಗತ್ತಿ

ಆದೇಶ ಪಾಲನೆಗೆ ಜ. 13ರ ಗಡುವು ನೀಡಿದ ಕಾಲೇಜು ಶಿಕ್ಷಣ ಇಲಾಖೆ

ಚಂದ್ರಹಾಸ ಹಿರೇಮಳಲಿ
Published 31 ಆಗಸ್ಟ್ 2024, 22:30 IST
Last Updated 31 ಆಗಸ್ಟ್ 2024, 22:30 IST
ಯುಜಿಸಿ
ಯುಜಿಸಿ   

ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಪಡೆಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಜನವರಿ ನಂತರ ಕೆಲಸ ಕಳೆದುಕೊಳ್ಳಲಿದ್ದಾರೆ.

ಈ ಕುರಿತು ಕಾಲೇಜು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆಯನ್ನು 2025ರ ಜನವರಿ 13ರೊಳಗೆ ಪಡೆಯಬೇಕು ಎಂಬ ಷರತ್ತು ವಿಧಿಸಿದೆ. ಆದೇಶ ಜಾರಿಯಾದರೆ 5,890 ಅತಿಥಿ ಉಪನ್ಯಾಸಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡುವವರು ಯುಜಿಸಿ ನಿಯಮದಂತೆ ಸ್ನಾತಕೋತ್ತರ ಪದವಿಯ ಜೊತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಇಲ್ಲವೇ, ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ತೇರ್ಗಡೆಯಾಗಿರಬೇಕು ಅಥವಾ ಪಿಎಚ್‌.ಡಿ ಪದವಿ ಪಡೆದಿರಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 10,600 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಶೇ 55ರಷ್ಟು ಮಂದಿ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲ. 

ADVERTISEMENT

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಅತಿಥಿ ಉಪನ್ಯಾಸಕರೂ ಹೊಂದಬೇಕು ಎಂದು ಕೆಲ ವರ್ಷಗಳ ಹಿಂದೆಯೇ ಉನ್ನತ ಶಿಕ್ಷಣ ಇಲಾಖೆ ಮಾನದಂಡ ನಿಗದಿ ಮಾಡಿತ್ತು. 

2-3 ದಶಕಗಳಿಂದ ಕೆಲಸ ಮಾಡುತ್ತಿರುವ ಶೇ 80ರಷ್ಟು ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವಿಯನ್ನಷ್ಟೇ ಪಡೆದಿದ್ದಾರೆ. ಕಡಿಮೆ ಗೌರವಧನ ಪಡೆದು ವಾರಕ್ಕೆ ಕೇವಲ ಎಂಟು ಗಂಟೆ ಬೋಧನಾ ಅವಧಿ ನಿರ್ವಹಿಸುತ್ತಿರುವುದರಿಂದ, ಯುಜಿಸಿ ನಿಯಮಗಳನ್ನು ಅನ್ವಯಿಸಬಾರದು ಎಂದು ಅತಿಥಿ ಉಪನ್ಯಾಸಕರ ಸಂಘಟನೆಗಳು ಅಂದು ಮನವಿ ಮಾಡಿದ್ದವು. ಇದಕ್ಕೆ ಸ್ಪಂದಿಸಿದ್ದ ಸರ್ಕಾರ ಮೂರು ವರ್ಷಗಳ ಕಾಲಾವಧಿ ನೀಡಿ, 2022ರ ಜನವರಿ 14ರಂದು ಆದೇಶ ಹೊರಡಿಸಿತ್ತು. ಬರುವ ಜನವರಿ 13ಕ್ಕೆ ಮೂರು ವರ್ಷಗಳ ಅವಧಿ ಮುಕ್ತಾಯವಾಗಲಿದೆ. ಅಂದು ಹೊರಡಿಸಿದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ನೆನಪಿಸಿದೆ. 

‘ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲದಿದ್ದರೂ ಸೇವಾ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿತ್ತು. ಹಾಗಾಗಿ, ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮ ಕಡ್ಡಾಯ ಮಾಡಬಾರದು. ವಿದ್ಯಾರ್ಹತೆ ನೆಪದಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವವರಿಗೆ ಅನ್ಯಾಯ ಮಾಡಬಾರದು. ಅವರ ಅನುಭವ ಪರಿಗಣಿಸಿ, ಅವಕಾಶ ಮುಂದುವರಿಸಬೇಕು’ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಒತ್ತಾಯಿಸಿದ್ದಾರೆ.

1,500 ‘ಅತಿಥಿ’ಗಳಿಗೆ ಅನಿಶ್ಚಿತತೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅವರಿಗೆ ಸ್ಥಳ ನಿಯೋಜನೆ ಮಾಡಿದ ನಂತರ ಸುಮಾರು 1,500 ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡಲಾಗುತ್ತದೆ.

2024–25ನೇ ಸಾಲಿನ ಅತಿಥಿ ಉಪನ್ಯಾಸಕರನ್ನು ಇಂತಹ ಷರತ್ತಿಗೆ ಒಳಪಟ್ಟು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಕಾಯಂ ಉಪನ್ಯಾಸಕರು ಕೆಲಸಕ್ಕೆ ವರದಿ ಮಾಡಿಕೊಂಡಾಗ ಆ ಕಾಲೇಜಿಗೆ ಕೊನೆಯದಾಗಿ ಕೆಲಸಕ್ಕೆ ಹಾಜರಾಗಿದ್ದ ಅತಿಥಿ ಉಪನ್ಯಾಸಕರನ್ನು ಬಿಡುಗಡೆ ಮಾಡಬೇಕು ಎಂದು ಪ್ರಾಂಶುಪಾಲರಿಗೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

ವಿದ್ಯಾರ್ಹತೆಯ ವಿಷಯದಲ್ಲಿ 2022ರಲ್ಲಿ ಹೊರಡಿಸಿದ್ದ ಆದೇಶ ಪಾಲಿಸಿದ್ದೇವೆ. ಸರ್ಕಾರ ಮುಂದೆ ತೆಗೆದುಕೊಳ್ಳುವ ನಿರ್ಧಾರದಂತೆ ಕ್ರಮಕೈಗೊಳ್ಳಲಾಗುವುದು
ಜಿ. ಜಗದೀಶ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ
ಯುಜಿಸಿ ಹಿಂದೆ ಎಂ.ಫಿಎಲ್‌ ಅನ್ನು ಎನ್‌ಇಟಿ, ಕೆ–ಸೆಟ್‌ಗೆ ಸಮ ಎಂದಿತ್ತು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೂ ಪರಿಗಣಿಸಲಾಗಿತ್ತು. ಅತಿಥಿ ಉಪನ್ಯಾಸಕರಿಗೂ ಆ ನಿಯಮ ಅನ್ವಯಿಸಬೇಕು
ಹನುಮಂತಗೌಡ ಕಲ್ಮನಿ, ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.