ಬಳ್ಳಾರಿ: ಲೋಕಸಭೆ ಚುನಾವಣೆಯ ಮತದಾನ ಮುಗಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಗೆಲುವಿನ ನಿರೀಕ್ಷೆ ಮತ್ತು ವಿಶ್ವಾಸದಲ್ಲಿದ್ದಾರೆ.
ಮತದಾನದ ಮಾರನೇ ದಿನವಾದ ಬುಧವಾರ ಈ ಇಬ್ಬರೂ ಚುನಾವಣೆ ಒತ್ತಡ ಮರೆತು ಮನೆ ಮಂದಿ ಹಾಗೂ ಕಾರ್ಯಕರ್ತರೊಡನೆ ಬೆರೆತಿದ್ದರು.
ನಗರದ ಬೆಂಗಳೂರು ರಸ್ತೆಯಲ್ಲಿರುವ ಮನೆಯಲ್ಲಿ 'ಪ್ರಜಾವಾಣಿ' ಓದುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ,‘ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಉಪಚುನಾವಣೆಗಿಂತ ಈ ಬಾರಿಯ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ’ಎಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ದೊಡ್ಡ ಸಮುದ್ರವಿದ್ದಂತೆ. ಬರೋರು ಬರ್ತಾರೆ, ಹೋಗೊರು ಹೋಗ್ತಾರೆ. ಇವೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಪಕ್ಷಕ್ಕೆ ಇದೆ.ರಮೇಶ್ ಜಾರಕಿಹೊಳಿಯೊಂದಿಗೆ ಮಾತನಾಡಿ ಮನವೊಲಿಸಲು ಪ್ರಯತ್ನಿಸುವೆ’ಎಂದರು.
‘ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳುವ ಬಿಜೆಪಿ ನಾಯಕರಿಗೆ ಸಂವಿಧಾನ, ಜನಾದೇಶದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಬಿಜೆಪಿ ನಾಯಕರು ಹಿಂಬಾಗಿಲಿನಿಂದ ಶಾಸಕರ ಮೇಲೆ ಒತ್ತಡ ಹೇರಿ ರಾಜೀನಾಮೆ ಕೊಡಿಸುವ ಮೂಲಕ ಅಪರೇಷನ್ ಕಮಲಕ್ಕೆ ಕೈಹಾಕಿದ್ದಾರೆ. ಆದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೆಡ್ಡಿ ಮನೆಯಲ್ಲಿ ಉಪಾಹಾರ: ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಬಸವೇಶ್ವರ ನಗರದ ಮನೆ ಸಮೀಪದ ಉದ್ಯಾನದಲ್ಲಿ ಎಂದಿನಂತೆ ವಾಕಿಂಗ್, ಧ್ಯಾನ ಮಾಡಿದರು. ಕೋಟೆ ಮಲ್ಲೇಶ್ವರ ಗುಡಿ, ದುರ್ಗಮ್ಮ ಗುಡಿಗೆ ಭೇಟಿ ನೀಡಿದರು.ನಂತರ ತಮ್ಮ ಆಪ್ತ, ಮಾಜಿ ಶಾಸಕ ಶಿವರಾಮರೆಡ್ಡಿ ಅವರ ಆಹ್ವಾನದ ಮೇರೆಗೆ ಅವರ ಮನೆಗೆ ತೆರಳಿ ಉಪಾಹಾರ ಸ್ವೀಕರಿಸಿದರು.
ನಂತರ ನಕ್ಷತ್ರ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದ ಎಲ್ಲೆಡೆ ಮತದಾರರ ಉತ್ತಮ ಸ್ಪಂದನೆ ದೊರಕಿದೆ. ಒಂದು ಲಕ್ಷ ಮತಗಳ ಅಂತರದಲ್ಲಿ ವಿಶ್ವಾಸವಿದೆ’ ಎಂದರು.
‘ಫಲಿತಾಂಶ ಪ್ರಕಟವಾಗಲು ಒಂದು ತಿಂಗಳ ಕಾಲಾವಕಾಶ ಇರುವುದರಿಂದ ಈ ಅವಧಿಯಲ್ಲಿ ಕ್ಷೇತ್ರದಲ್ಲಿ ಸುತ್ತಾಡಿ ಮತದಾರರಿಗೆ, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವೆ’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.