ಬೆಂಗಳೂರು: ‘ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಮಗಾರಿಯನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಲು ಯತ್ನಿಸುತ್ತಿದ್ದು, ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ‘ಯುಕೆಪಿ ಮೂರನೇ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯಿಂದ ತೀರ್ಪು ಬಂದ ಬಳಿಕ ಯೋಜನೆ ಕೈಗೆತ್ತಿಕೊಳ್ಳಲು 2012-13ರಲ್ಲಿ ₹ 17,207 ಕೋಟಿ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ನಂತರ ಸರ್ಕಾರ ಬದಲಾಯಿತು. ಆರಂಭದಲ್ಲಿ ₹ 735 ಕೋಟಿಯನ್ನು ಬಿಜೆಪಿ ಸರ್ಕಾರ ವೆಚ್ಚ ಮಾಡಿತ್ತು. ಸಿದ್ದರಾಮಯ್ಯ ಸರ್ಕಾರ ₹ 7,600 ಕೋಟಿ, ಕುಮಾರಸ್ವಾಮಿ ಸರ್ಕಾರ ₹ 1,346 ಕೋಟಿ ಖರ್ಚು ಮಾಡಿತ್ತು’ ಎಂದು ವಿವರಿಸಿದರು.
‘ಯಡಿಯೂರಪ್ಪ ಸರ್ಕಾರ ಮತ್ತೆ ₹ 3,000 ಕೋಟಿ ಖರ್ಚು ಮಾಡಿದೆ. ಪ್ರಸಕ್ತ ಬಜೆಟ್‌ನಲ್ಲಿ ₹ 5,600 ಕೋಟಿ ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡಲು ಉದ್ದೇಶಿಸಲಾಗಿದೆ’ ಎಂದರು.
ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ‘₹ 5,600 ಕೋಟಿ ಸಾಕಾಗುವುದಿಲ್ಲ. ₹ 1 ಲಕ್ಷ ಕೋಟಿಯ ಯೋಜನೆಯಿದು. ಕಳೆದ ವರ್ಷವೂ ಸರಿಯಾದ ಅನುದಾನ ಒದಗಿಸಲಿಲ್ಲ. ಆದ್ಯತೆ ಮೇಲೆ ಪರಿಗಣಿಸಿ, ಹೆಚ್ಚಿನ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.
ಆಗ ಕಾರಜೋಳ, ‘ಆರಂಭದಲ್ಲಿ ₹ 17,207 ಕೋಟಿ ಇದ್ದ ಈ ಯೋಜನೆ, ಬಳಿಕ ₹ 51,148 ಕೋಟಿಗೆ ಏರಿಕೆ ಆಗಿತ್ತು. ₹ 35 ಸಾವಿರ ಕೋಟಿ (ಆರ್ ಆ್ಯಂಡ್ ಆರ್) ಮುಳುಗಡೆ ಪ್ರದೇಶದ ಜನರಿಗೆ ಪರಿಹಾರ ನೀಡಲು ಬೇಕಿದೆ. ಸಿವಿಲ್ ಕಾಮಗಾರಿಗೆ ₹ 16 ಸಾವಿರ ಕೋಟಿ ಅಗತ್ಯವಿದೆ. ವಾರ್ಷಿಕ ಶೇ 10ರಷ್ಟು ಯೋಜನಾ ವೆಚ್ಚದಲ್ಲಿ ಹೆಚ್ಚಾಗುತ್ತಿದೆ. ಯಾವುದೇ ಪರಿಸ್ಥಿತಿಯಲ್ಲಿ ಯೋಜನೆ ಮುಗಿಸಲು ಯತ್ನಿಸಲಾಗುವುದು. ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರಕ್ಕೆ ಪತ್ರ ವ್ಯವಹಾರ ಕೂಡಾ ನಡೆಯುತ್ತಿದೆ. ರಾಜ್ಯದ ಪಾಲಿನ ನೀರು ಸಂಪೂರ್ಣ ಬಳಸಲು ಯತ್ನಿಸಲಾಗುತ್ತದೆ’ ಎಂದೂ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.