ಬೆಳಗಾವಿ: ‘ಮುಂಬರುವ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ’ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದರು.
ಹುಕ್ಕೇರಿಯಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಥಣಿಯಲ್ಲಿ ಲಕ್ಷ್ಮಣ ಸವದಿ, ಕಾಗವಾಡದಲ್ಲಿ ರಾಜು ಕಾಗೆ ಹಾಗೂ ಗೋಕಾಕದಲ್ಲಿ ಅಶೋಕ ಪೂಜಾರಿಗೆ ಬಿಜೆಪಿ ಟಿಕೆಟ್ ಖಚಿತ’ ಎಂದರು.
‘ಈ ಸರ್ಕಾರದಲ್ಲಿ ಸಚಿವನಾಗುವ ಅವಕಾಶ ನನಗೂ ಇದೆ. ಈಗ ಸಿಕ್ಕಿಲ್ಲ. ಮುಂದೆ ಏನಾಗುತ್ತದೆಯೋ ನೋಡೋಣ’ ಎಂದರು.
‘ನೆರೆ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗುವ ಅಗತ್ಯವಿಲ್ಲ’ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ತೇಜಸ್ವಿ ಇನ್ನೂ ಸಣ್ಣವನು. ಇನ್ನೂ ಅನುಭವ ಕಡಿಮೆ. ಕೇಂದ್ರ ಹಾಗೂ ರಾಜ್ಯದ ನೋಟುಗಳು ಒಂದೇ ಆಗಿರುತ್ತವೆ. ಅವು ಒಂದೇ ಬಣ್ಣದಾಗಿರುತ್ತವೆ’ ಎಂದರು.
ಕತ್ತಿ ಹೇಳಿಕೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಟಾಂಗ್ ನೀಡಿದರು. ‘ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ಕತ್ತಿಯವರಾಗಲಿ, ನಾವಾಗಲಿ ತೀರ್ಮಾನಿಸುವುದಿಲ್ಲ. ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತವೆ. ಹೈಕಮಾಂಡ್ ನಿರ್ಧಾರದಂತೆ ನಾವು ನಡೆದುಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
‘ನಾನು ಎಂದೋ ಮಾತನಾಡಿದ ವಿಡಿಯೊ ಈಗ ವೈರಲ್ ಮಾಡಿದ್ದಾರೆ. ಅನರ್ಹ ಶಾಸಕ ಮಹೇಶ ಕುಮಠಳ್ಳಿ ನಿಂದಿಸಿದೆ ಎಂದು ಹಬ್ಬಿಸಿದ್ದಾರೆ. ನನ್ನ ಪರ ಬ್ಯಾಟ್ ಮಾಡಿದವರು ಹಾಗೂ ವಿರೋಧ ಮಾಡಿದವರೆಲ್ಲರನ್ನೂ ಸ್ವಾಗತಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದರು.
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿದರೆ ಸಂತ್ರಸ್ತರಿಗೆ ಪ್ರಯೋಜನ ಆಗುವುದಿಲ್ಲ, ಕೇಂದ್ರದಿಂದ ಹಣ ತರಲಿ’ ಎಂಬ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆಗೆ, ‘ವಿರೋಧ ಪಕ್ಷದಲ್ಲಿದ್ದವರು ನಮ್ಮನ್ನು ಹೊಗಳುವುದಿಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಆಡಳಿತದಲ್ಲಿದ್ದುಕೊಂಡು ನಮ್ಮ ಕೆಲಸ ನಾವು ನಿರ್ವಹಿಸುತ್ತಿದ್ದೇವೆ. ಪರಿಹಾರ ನೀಡಲು ಹಣದ ಕೊರತೆ ಇಲ್ಲ. ಜಿಲ್ಲೆಗೆ ₹ 500 ಕೋಟಿ ಬಿಡುಗಡೆ ಮಾಡಿದ್ದೇವೆ. ಕೇಂದ್ರದಿಂದಲೂ ಬರುತ್ತದೆ. ಅಲ್ಲಿವರೆಗೆ ನಮ್ಮಲ್ಲಿರುವ ಹಣದಲ್ಲಿಯೇ ಕೆಲಸ ಆರಂಭಿಸಿದ್ದೇವೆ’ ಎಂದು ಸಮರ್ಥಿಸಿಕೊಂಡರು.
ಒಂದೇ ವಿಮಾನದಲ್ಲಿ ಪ್ರಯಾಣ: ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಮ್ಮ ಅಳಿಯ ಅಂಬಿರಾವ್ ಪಾಟೀಲ ಜೊತೆ ಸವದಿ ಅವರೊಂದಿಗೆ ಸಾಂಬ್ರಾದಿಂದ ಒಂದೇ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದರು.
ಪ್ರತಿಕ್ರಿಯಿಸಲು ನಿರಾಕರಿಸಿದರು. ರಮೇಶ ಅಳಿಯನನ್ನು ಇದೇ ಮೊದಲ ಬಾರಿಗೆ ಜೊತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿರುವುದು ಕುತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.