ADVERTISEMENT

ಉಮೇಶ್‌ ಕತ್ತಿ ನಿಧನ| ಶಾಂತವಾಯಿತು ‘ಉತ್ತರ’ದ ಧ್ವನಿ

ಅಧಿಕಾರದ ಬಯಕೆಯಿಂದ ದೂರ, ಅಭಿವೃದ್ಧಿ ಹಂಬಲದ ಹರಿಕಾರ (ಜನನ 1960ರ ಮಾರ್ಚ್‌ 14. ಮರಣ– 2022 ಸೆ.6)

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 19:57 IST
Last Updated 6 ಸೆಪ್ಟೆಂಬರ್ 2022, 19:57 IST
ಉಮೇಶ್‌ ಕತ್ತಿ ಅವರು  ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭ
ಉಮೇಶ್‌ ಕತ್ತಿ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭ    

ಬೆಳಗಾವಿ: ಸಚಿವ ಉಮೇಶ ಕತ್ತಿ ಅವರ ಅಗಲಿಕೆಯಿಂದಾಗಿ ಉತ್ತರ ಕರ್ನಾಟಕದ ಜನಪರ ಧ್ವನಿಯೊಂದು ಶಾಂತವಾದಂತಾಗಿದೆ. ಈ ಭಾಗವು ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ, ಈ ತಾರತಮ್ಯ ಅಸಹನೀಯ. ಹಾಗಾಗಿ, ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಅವರು ಪದೇಪದೇ ಧ್ವನಿ ಎತ್ತಿದ್ದರು.

ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಒಂಬತ್ತು ಬಾರಿ ಸ್ಪರ್ಧಿಸಿದ್ದ ಅವರು ಪ್ರಸಕ್ತ ಅವಧಿ ಸೇರಿದಂತೆ ಎಂಟು ಬಾರಿ ಗೆದ್ದಿದ್ದರು. ಒಮ್ಮೆ ಕೇವಲ 800 ಮತಗಳ ಅಂತರದಿಂದ ಸೋಲು ಕಂಡಿದ್ದರು. ಎಂಟು ಬಾರಿ ಶಾಸಕರಾಗಿ, ಮೂರು ಅವಧಿಯಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು.

ADVERTISEMENT

62 ವರ್ಷದ ವಯಸ್ಸಿನ ಉಮೇಶ ಕತ್ತಿ ಅವರು ಜನಪರ ನಿಲುವು, ಗಟ್ಟಿಧ್ವನಿ ಹಾಗೂ ಮುತ್ಸದ್ದಿ ಗುಣಗಳ ಕಾರಣಕ್ಕಾಗಿ ಸೋಲರಿಯದ ಸರದಾರ ಎಂದೇ ಖ್ಯಾತರಾಗಿದ್ದರು. ಸಹಕಾರ ಕ್ಷೇತ್ರ ಹಾಗೂ ಸಕ್ಕರೆ ಕಾರ್ಖಾನೆಗಳನ್ನು ಅಭಿವೃದ್ಧಿಯಲ್ಲಿಯೂ ಅವರದು ಎತ್ತಿದ ಕೈ.

ವಾರದ ಹಿಂದಷ್ಟೇ ಬೆಳಗಾವಿಗೆ ಬಂದಿದ್ದರು. ನಗರದಲ್ಲಿ ಅವಿತ ಚಿರತೆ ಸೆರೆ ಕಾರ್ಯಾಚರಣೆಯಲ್ಲೂ ಗಮನ ಹರಿಸಿದ್ದರು. ಇದು ಅವರು ಬೆಳಗಾವಿ ಕೊನೆಯ ಭೇಟಿ. ‘ಸರ್ ಚಿರತೆ ಹೇಗೆ ಮತ್ತು ಏಕೆ ಬೆಳಗಾವಿಗೆ ಬಂದಿದೆ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ್ದ ಅವರು ‘ನಾನು ಹುಲಿ, ಅದು ಚಿರತೆ. ನನ್ನ ಭೇಟಿ ಆಗಲು ಬಂದಿದೆ ಮಾರಾಯಾ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಯಾವತ್ತೂ ಕೋಪ, ಒತ್ತಡ, ದುಡುಕು ಸ್ವಭಾವಗಳನ್ನು ಅವರು ಎಲ್ಲಿಯೂ ಎಂದೂ ಪ್ರದರ್ಶಿಸಲಿಲ್ಲ. ಬದಲಾಗಿ ತಮ್ಮ ಮೊಣಚಾದ ಮಾತುಗಳಿಂದಲೇ ತಿವಿಯುತ್ತಿದ್ದರು.

ಉತ್ತರ ಕರ್ನಾಟಕದ ಗಟ್ಟಿ ಧ್ವನಿ: ಉತ್ತರ ಕರ್ನಾಟಕದ ಪ್ರಗತಿಗಾಗಿ ಆಗಾಗ ದನಿ ಎತ್ತಿ ಕಾಳಜಿ ಪ್ರದರ್ಶಿಸುವ ಮತ್ತು ಸಹಕಾರ ತಳಹದಿಯ ಕ್ಷೇತ್ರ ಹುಕ್ಕೇರಿ ಪ್ರತಿನಿಧಿಸುವ ಶಾಸಕ ಉಮೇಶ ಕತ್ತಿ ವಿಶಿಷ್ಟ ರಾಜಕಾರಣಿ.

ದಿವಂಗತ ಜೆ.ಎಚ್. ಪಟೇಲ್ ಅವರ ಸಂಪುಟದಲ್ಲಿ ಅವರು ಮೊದಲ ಬಾರಿಗೆ ಮಂತ್ರಿಯಾಗಿದ್ದರು. ನಂತರ ಬಿ.ಎಸ್. ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸಕ್ಕರೆ, ಲೋಕೋಪಯೋಗಿ, ತೋಟಗಾರಿಕೆ ಹಾಗೂ ಬಂದಿಖಾನೆ ಹಾಗೂ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಆಡಳಿತದಲ್ಲಿ ಅಪಾರ ಅನುಭವ ಹೊಂದಿದವರು.

ಯಡಿಯೂರಪ್ಪ ಅವರ ಅವಧಿಯಲ್ಲಿ ಕೃಷಿ ಮಂತ್ರಿಯಾಗಿದ್ದ ಅವರು ದೇಶದಲ್ಲೇ ಮೊದಲ ಬಾರಿಗೆ ‘ಕೃಷಿ ಬಜೆಟ್‌’ ಮಂಡಿಸಿದ್ದರು. ರೈತರು ಅಭಿವೃದ್ಧಿಯಾಗಬೇಕೆಂದರೆ ಅವರಿಗೆ ಅವರದೇ ಆದ ಕಾನೂನುಗಳು ಬೇಕು, ಅವರದೇ ಆದ ಆರ್ಥಿಕ ನೀತಿ ಬೇಕು, ಅದರ ಅನುಷ್ಠಾನಕ್ಕೆ ಪ್ರತ್ಯೇಕ ಬಜೆಟ್‌ ಬೇಕು ಎಂದು ವಿಧಾನಸೌಧದಲ್ಲಿ ಧ್ವನಿ ಎತ್ತಿದ್ದರು. ಅದನ್ನು ಅವರು ಸಾಧಿಸಿಯೂ ತೋರಿಸಿದ ಛಲಗಾರ.

ಸಾಹುಕಾರ ಎಂದೇ ಖ್ಯಾತಿ: 1960ರ ಮಾರ್ಚ್‌ 14ರಂದು ಆಗರ್ಭ ಶ್ರೀಮಂತ ಕತ್ತಿ ಮನೆತನದಲ್ಲಿ ಹಿರಿಯ ಸಹಕಾರಿ ದಿ.ವಿಶ್ವನಾಥ–ರಾಜೇಶ್ವರಿ ದಂಪತಿ ಜೇಷ್ಠ ಪುತ್ರನಾಗಿ ಜನಿಸಿದರು. ಸ್ವಗ್ರಾಮದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದು, ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು.

ವಿಶ್ವ ಕನ್ನಡ ಸಮ್ಮೇಳದ ರೂವಾರಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವರಾಗಿ 2011 ಮಾರ್ಚ್ 11ರಿಂದ 13ರವರೆಗೆ ವಿಶ್ವಕನ್ನಡ ಸಮ್ಮೇಳನವನ್ನು ಅಭೂತಪೂರ್ವವಾಗಿ ಆಯೋಜಿಸಿ, ಮರಾಠಿಗರಿಂದಲೂ ಭೇಷ್ ಎನಿಸಿಕೊಂಡ ಧುರೀಣ. 86 ಸ್ಥಾನಗಳ ಪೈಕಿ 64 ಸ್ಥಾನಗಳನ್ನು ಗೆಲ್ಲಿಸಿ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾರಣರಾದವರು.

1985ರಲ್ಲಿ ತಂದೆ ವಿಶ್ವನಾಥ ಕತ್ತಿ ಅವರ ಅಕಾಲಿಕ ನಿಧನದಿಂದ ತೆರವಾದ ಹುಕ್ಕೇರಿ ಕ್ಷೇತ್ರದಿಂದ ಜನತಾ ಪಕ್ಷದಿಂದ ಶಾಸಕರಾಗಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆಗ ಅವರಿಗೆ 25ರ ಹರೆಯ. 1989, 1994ರಲ್ಲಿ ಶಾಸಕರಾಗಿ ಪುನರಾಯ್ಕೆಯಾದ ನಂತರ ರಾಜಕೀಯ ಜೀವನದಲ್ಲಿ ಅನೇಕ ಬದಲಾವಣೆಗಳಾದವು. 2008ರಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಈ ನಡುವೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಮತ್ತೆ ಶಾಸಕರಾದರು.

1995ರಲ್ಲಿ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಇಂದಿನವರೆಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಒಮ್ಮೆ ಸೋತರೂ ದೃತಿಗೆಡದೆ ತಂದೆ ಹೆಸರಿನಲ್ಲಿ ಬೆಲ್ಲದ ಬಾಗೇವಾಡಿಯಲ್ಲಿ ‘ವಿಶ್ವನಾಥ ಸಕ್ಕರೆ ಕಾರ್ಖಾನೆ’ ಸ್ಥಾಪಿಸಿ ಈ ಭಾಗದ ಸಾವಿರಾರು ರೈತರು ಮತ್ತು ಕಾರ್ಮಿಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರ್ಥಿಕ ಏಳಿಗೆಗೆ ಕಾರಣರಾಗಿದ್ದಾರೆ. ಕಾರ್ಖಾನೆಯ ಆಡಳಿತವನ್ನು ಈಗ ಪುತ್ರ ನಿಖಿಲ್ ಕತ್ತಿಗೆ ವಹಿಸಿದ್ದಾರೆ.

2017ರಲ್ಲಿ ಹಿರಾ ಶುಗರ್ಸ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದವರು. ಪುತ್ರ ನಿಖಿಲ್ ಕತ್ತಿ ಅವರನ್ನು ಅಮ್ಮಣಗಿ ಜಿಲ್ಲಾ ಪಂಚಾಯ್ತಿಗೆ ಆಯ್ಕೆಯಾಗಿದ್ದರು. ಸಹೋದರ ರಮೇಶ ಕತ್ತಿ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ.

ನಾನೇ ಸಿ.ಎಂ ಎಂದಿದ್ದರು

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಧ್ವನಿ ಎತ್ತಿದ್ದ ಅವರು ವಿಶೇಷ ಗುಣದಿಂದಲೇ ಹೆಸರುವಾಸಿ. ‘ಮುಂದೆ ನಾನೇ ಸಿ.ಎಂ’ ಎಂದು ಗಟ್ಟಿಯಾಗಿ ಹೇಳಿಕೊಳ್ಳುವ ಮೂಲಕ ರಾಜಕೀಯ ಚರ್ಚೆಗೂ ಇಂಬು ನೀಡಿದ್ದರು.

‘ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕವನ್ನು ಮೂರು ರಾಜ್ಯಗಳಾಗಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ’ ಎಂಬ ಮಾಹಿತಿಯನ್ನು ಬಹಿರಂಗ ಸಭೆಯಲ್ಲಿ ನೀಡುವ ಮೂಲಕ ಜನರ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.