ADVERTISEMENT

ಅರ್ಧದಷ್ಟು ಅನಧಿಕೃತ, ಗಣಿಗಾರಿಕೆ ನಿರಂತರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:30 IST
Last Updated 24 ಜುಲೈ 2021, 19:30 IST
ಶಿವಮೊಗ್ಗ ಸಮೀಪದ ಹುಣಸೋಡಿನ ಕ್ರಷರ್.
ಶಿವಮೊಗ್ಗ ಸಮೀಪದ ಹುಣಸೋಡಿನ ಕ್ರಷರ್.   

ಶಿವಮೊಗ್ಗ/ಚಿತ್ರದುರ್ಗ:ಶಿವಮೊಗ್ಗ, ಭದ್ರಾವತಿ, ಹೊಸನಗರ ತಾಲ್ಲೂಕು ಸೇರಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ 150ಕ್ಕೂ ಹೆಚ್ಚು ಕಲ್ಲು ಕ್ವಾರಿಗಳಿವೆ. ಅವುಗಳಲ್ಲಿ ಅರ್ಧದಷ್ಟು ಅನಧಿಕೃತ.

ಶಿವಮೊಗ್ಗ ಸಮೀಪದ ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಊರುಗಡೂರು, ಕಲ್ಲಗಂಗೂರು, ಮತ್ತೂರು, ಭದ್ರಾವತಿ ಭಾಗ, ಪಶ್ವಿಮಘಟ್ಟದ ಹೊಸನಗರ, ತೀರ್ಥಹಳ್ಳಿ ಭಾಗದಲ್ಲೂ ಕಲ್ಲು ಗಣಿಗಾರಿಗೆ ನಿರಂತರವಾಗಿ ನಡೆಯುತ್ತಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಕ್ವಾರಿಗಳಲ್ಲಿ ನೂರಾರು ಅಡಿ ಆಳ, ಅಗಲದ ಕಂದಕಗಳಾಗಿವೆ.

ನೆಪಕ್ಕಷ್ಟೆ ದಂಡದ ಅಸ್ತ್ರ: ಹಲವು ವರ್ಷಗಳಿಂದ ಅನಧಿಕೃತ ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸುವ ಗೋಜಿಗೆ ಹೋಗಿಲ್ಲ. ವರ್ಷದ ಹಿಂದೆ ಡ್ರೋನ್ ತಂತ್ರಜ್ಞಾನ ಬಳಸಿ ಜಿಲ್ಲೆಯ 55 ಕಲ್ಲು ಕ್ವಾರಿಗಳ ಸರ್ವೆ ನಡೆಸಿದ್ದರು. ಆಗ ಹಲವು ಕ್ವಾರಿಗಳು ನಿಯಮ ಮೀರಿ ಕಾರ್ಯ ನಿರ್ವಹಿಸಿರುವುದು ದೃಢಪಟ್ಟಿತ್ತು.

ADVERTISEMENT

ಅವಘಡಗಳು ನಡೆದಾಗ, ಸಾರ್ವಜನಿಕರ ಪ್ರತಿಭಟನೆ, ಒತ್ತಡಗಳು ಹೆಚ್ಚಾದಾಗ ಅಂತಹ ಕ್ವಾರಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಲಾಗುತ್ತದೆ. ಕೆಲವರು ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು ವಿನಾಯಿತಿ ಪಡೆಯುತ್ತಾರೆ. ಇಂತಹ ದಂಡದ ಬಾಕಿ ಮೊತ್ತವೇ ಜಿಲ್ಲೆಯಲ್ಲಿ ಸುಮಾರು ₹ 200 ಕೋಟಿಯಷ್ಟಿದೆ.

ಅಧಿಕೃತ ಕ್ರಷರ್‌ ಬಳಿ ಅನಧಿಕೃತ ಕ್ವಾರಿ: ಶಿವಮೊಗ್ಗ ಜಿಲ್ಲೆಯಲ್ಲಿರುವ ಬಹುತೇಕ ಕ್ರಷರ್‌ ಘಟಕಗಳಿಗೆ‌ ಕ್ವಾರಿಗಳೇ ಇಲ್ಲ. ದೂರದ ಕ್ವಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕ್ರಷರ್ ಮಾಲೀಕರು ನಂತರ ಅನಧಿಕೃತವಾಗಿ ತಾವೇ ಕ್ವಾರಿಗಳ ನಿರ್ವಹಣೆ ಮಾಡುತ್ತಾರೆ.ಕ್ರಷರ್‌ಗಳಿಗೆ ಕಚ್ಚಾ ಸಾಮಗ್ರಿ ಪೂರೈಕೆ ಎಲ್ಲಿಂದ ಆಗುತ್ತದೆ ಎಂಬುದನ್ನು ಪರಿಶೀಲಿಸುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ. ಇದು ಅಕ್ರಮ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ.ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆ ಸಕ್ರಿಯವಾಗಿದೆ. ಅರಣ್ಯ ಭೂಮಿ ಒತ್ತುವರಿ, ಕೃಷಿ ಜಮೀನು ಕಬಳಿಕೆಯಂತಹ ಆರೋಪಗಳು ಸ್ಥಳೀಯರಿಂದ ಆಗಾಗ ಕೇಳಿ ಬರುತ್ತವೆ.

ಅನಿಲ್‌ ಅಗರವಾಲ್‌ ಮಾಲೀಕತ್ವದ ವೇದಾಂತ ಸೇಸಾ ಗೋವಾ ಲಿಮಿಟೆಡ್‌, ಆರ್‌.ಪ್ರವೀಣ್‌ ಚಂದ್ರ ಮೈನ್ಸ್‌ ಹಾಗೂ ಜೆಎಸ್‌ಡಬ್ಲ್ಯುಕಂಪನಿಗಳು ಜಿಲ್ಲೆಯಲ್ಲಿ ಗಣಿ ಗುತ್ತಿಗೆ ಪಡೆದಿವೆ. ಅಂದಾಜು 250 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ನಡೆಯುತ್ತಿದೆ. ಮೂರು ಕಂಪನಿಗಳಿಂದ, ಮಾಸಿಕ ಅಂದಾಜು ಎರಡು ಲಕ್ಷ ಮೆಟ್ರಿಕ್‌ ಟನ್‌ ಅದಿರು ಉತ್ಪಾದನೆ ಆಗುತ್ತಿದೆ. ಅದಿರು ಸಾಗಣೆ, ಪರವಾನಗಿ ಹಾಗೂ ಇ–ಹರಾಜು ಮುಕ್ತವಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ 102 ಕಲ್ಲು ಕ್ವಾರಿಗಳಿಗೆ ಅನುಮತಿ ಸಿಕ್ಕಿದೆ. ಇದರಲ್ಲಿ 52 ಕ್ವಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ರಾಜಕೀಯ ಪಕ್ಷದ ಯಾವುದೇ ನಾಯಕರ ಹಿಂಬಾಲಕರು, ಬೆಂಬಲಿಗರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಗಣಿ ಉದ್ಯಮ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.