ಬೆಂಗಳೂರು: ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು (ಪಿಸಿಆರ್) ದಾಖಲಿಸುವ ಮುನ್ನ ಅನುಸರಿಸಬೇಕಾದ ನ್ಯಾಯಿಕ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ (ಬಿಎನ್‌ಎಸ್‌ಎಸ್) ಕಲಂ 223ರ ಅಡಿಯಲ್ಲಿನ ವ್ಯಾಖ್ಯಾನವನ್ನು ತಾಂತ್ರಿಕವಾಗಿ ವಿಷದೀಕರಿಸಿರುವ ಕರ್ನಾಟಕ ಹೈಕೋರ್ಟ್, ಈ ಕುರಿತಾದ ದೇಶದ ಮೊದಲ ತೀರ್ಪನ್ನು ಪ್ರಕಟಿಸಿದೆ.
‘ನನ್ನ ವಿರುದ್ಧ ಅಪರಾಧ ಪ್ರಕ್ರಿಯಾ ದಂಡ ಸಂಹಿತೆ–1973ರ (ಸಿಆರ್‌ಪಿಸಿ) ಅಡಿಯಲ್ಲಿ ಖಾಸಗಿ ದೂರನ್ನು ದಾಖಲಿಸಿಕೊಳ್ಳಲು ಮುಂದಾಗಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕ್ರಮ ಕಾನೂನು ಬಾಹಿರವಾಗಿದೆ’ ಎಂದು ಆಕ್ಷೇಪಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ತೀರ್ಪು ಪ್ರಕಟಿಸಿದ್ದಾರೆ.
‘ಬಿಎನ್‌ಎಸ್‌ಎಸ್–2023ರ ಕಲಂ 223ರ ಪ್ರಕಾರ ಖಾಸಗಿ ದೂರನ್ನು ದಾಖಲಿಸಿಕೊಳ್ಳುವ ಮೊದಲಿಗೆ ಮ್ಯಾಜಿಸ್ಟ್ರೇಟ್, ಆರೋಪಿಗೆ ದೂರಿನ ಪ್ರತಿ, ಎಫ್‌ಐಆರ್, ಫಿರ್ಯಾದುದಾರ ಮತ್ತು ಸಾಕ್ಷಿಯ ಸ್ವಯಂ ಹೇಳಿಕೆ ಹಾಗೂ ಪೂರಕ ದಾಖಲೆಗಳನ್ನು ಒದಗಿಸಿ; ನಿಮ್ಮ ವಿರುದ್ಧ ಯಾಕೆ ಈ ದೂರನ್ನು ದಾಖಲಿಸಿಕೊಳ್ಳಬಾರದು ಎಂಬುದನ್ನು ವಿವರಿಸಿ ಎಂದು ಆರೋಪಿಯನ್ನು ಕೇಳುವುದು ಕಡ್ಡಾಯ. ಆರೋಪಿಯ ಉತ್ತರ ಸಮಂಜಸ ಎನಿಸಿದರಷ್ಟೇ ಅದನ್ನು ಸಂಜ್ಞೇಯ ಅಪರಾಧ ಎಂದು ಪರಿಗಣಿಸಬೇಕೊ ಬೇಡವೊ ಎಂಬ ತೀರ್ಮಾನವನ್ನು ಕೈಗೊಳ್ಳಬೇಕು ಮತ್ತು ಮುಂದಿನ ನ್ಯಾಯಿಕ ಪ್ರಕ್ರಿಯೆಗೆ ತಿದಿ ಒತ್ತಬೇಕು’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.
ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ 42ನೇ ಎಸಿಎಂಎಂ ಕೋರ್ಟ್ 2024ರ ಜುಲೈ 16ರಂದು ಹೊರಡಿಸಿರುವ ಆದೇಶವನ್ನು ವಜಾಗೊಳಿಸಿದೆ. ಅಂತೆಯೇ, ‘ಈ ಪ್ರಕರಣವನ್ನು ಪುನಃ ಹೊಸ ಪ್ರಕ್ರಿಯೆಗಳ ಮೂಲಕ ನಡೆಸಬೇಕು. ದೂರು ದಾಖಲಿಸಿಕೊಳ್ಳುವ ಮೊದಲ ಹಂತವನ್ನು ಮನಸ್ಸಿನಲ್ಲಿ ಇರಿಸಿಕೊಂಡು ಮುಂದುವರಿಯಬೇಕು. ಈ ಎಲ್ಲಾ ಪ್ರಕ್ರಿಯೆಯನ್ನು 4 ವಾರಗಳಲ್ಲಿ ಪೂರೈಸಬೇಕು’ ಎಂದು ನಿರ್ದೇಶಿಸಿದೆ.
‘ಲೋಕಸಭಾ ಚುನಾವಣೆ ಪ್ರಚಾರ ಮಾಡುವಾಗ ಯತ್ನಾಳ, ನನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ಸಚಿವ ಶಿವಾನಂದ ಪಾಟೀಲ ಅವರು, ಜಮಖಂಡಿ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ‘ಈ ದೂರನ್ನು ದಾಖಲಿಸಿಕೊಳ್ಳುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕ್ರಮ ಬಿಎನ್‌ಎಸ್‌ಎಸ್ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿ ಯತ್ನಾಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ವೆಂಕಟೇಶ್ ಪಿ.ದಳವಾಯಿ ಹಾಗೂ ಶಿವಾನಂದ ಪಾಟೀಲ ಪರ ನಿವೇದಿತಾ ಸಿ.ಶಿವಶಂಕರ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.