ಮಂಗಳೂರು/ ಮೈಸೂರು: ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ವಿವಿಧೆಡೆ ಗುರುವಾರ ಮಳೆಯಾಗಿದೆ. ಕೆಲವೆಡೆ ಜಿಟಿಜಿಟಿ ಮಳೆಯಾಗಿದ್ದು, ಇಡೀ ದಿನ ಶೀತ ಗಾಳಿ ಬೀಸಿದೆ.
ಉಡುಪಿ ಜಿಲ್ಲೆಯ ಕೋಡಿಯಲ್ಲಿ 8.5 ಸೆಂ.ಮೀ, ಪಾಂಡೇಶ್ವರದಲ್ಲಿ 5.7, ವಡ್ಡರ್ಸೆಯಲ್ಲಿ 5, ದಕ್ಷಿಣ ಕನ್ನಡ ಜಿಲ್ಲೆಯ ಸರಪಾಡಿಯಲ್ಲಿ 5 ಸೆಂ.ಮೀ. ಮಳೆಯಾಗಿದೆ. ಮೈಸೂರು ಭಾಗದ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಹಾಗೂ ಕೊಡಗಿನಲ್ಲಿ ಮಳೆ ಸುರಿದಿದೆ.
ಮಡಿಕೇರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಕಾಫಿ ಕೊಯ್ಲು ನಡೆದಿದ್ದು, ಕಣದಲ್ಲಿ ಹರಡಿದ್ದ ಕಾಫಿಹಣ್ಣುಗಳು ಹಾಳಾಗಿವೆ. ಗಿಡದಲ್ಲೇ ಇರುವ ಹಣ್ಣುಗಳು ಉದುರುತ್ತಿವೆ. ಬೆಳೆಗಾರರು ಅಪಾರ ನಷ್ಟಕ್ಕೆ ತುತ್ತಾಗಿದ್ದಾರೆ.
50 ಕೆ.ಜಿ ಕಾಫಿಯ ಚೀಲವೊಂದಕ್ಕೆ ₹ 7,000ಕ್ಕೂ ಅಧಿಕ ದರವಿದೆ. ಈ ವರ್ಷದ ಅತಿ ಹೆಚ್ಚಿನ ದರವಿದು. ಆದರೆ, ಈಗ ಬೀಳುತ್ತಿರುವ ಮಳೆ ಬೆಳೆಗಾರರ ನಿರೀಕ್ಷೆ ಕಮರುವಂತೆ ಮಾಡಿದೆ.
‘ಅಡಿಕೆ ಕೊಯಿಲು ನಡೆಯುತ್ತಿದ್ದು, ಸುಲಿದ ಅಡಿಕೆಯನ್ನು ಬೇಯಿಸಲು ಮತ್ತು ಒಣಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿರೀಕ್ಷಿಸಿದ ಬೆಲೆ ಸಿಗುವುದು ಕಷ್ಟ’ ಎಂದು ರೈತರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಎರಡು ದಿನ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಶುಕ್ರವಾರ ‘ಯೆಲ್ಲೊ ಅಲರ್ಟ್’ ಸೂಚನೆ ನೀಡಲಾಗಿದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಭಾರಿ ಮಳೆ ಆಗಲಿದೆ. ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಎರಡು ದಿನವೂ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆ ಸಾಧಾರಣ ಮಳೆಯಾಗಲಿದೆ. ಬೆಳಿಗ್ಗೆ ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.