ಬೆಂಗಳೂರು: ‘ಏಕಪಕ್ಷೀಯ ವಿಚ್ಛೇದನದ ಡಿಕ್ರಿ ಆದೇಶವನ್ನು ವಿಶೇಷ ಸಂದರ್ಭಗಳಲ್ಲಿ ಪರಿಗಣಿಸಬಹುದಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಮೃತ ಸೈನಿಕರೊಬ್ಬರ ಪತ್ನಿಗೆ ಎಲ್ಲ ರೀತಿಯ ವಿಧವಾ ಸೌಲಭ್ಯಗಳನ್ನು ಕಲ್ಪಿಸುವಂತೆ, ‘ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ’ಗೆ ಆದೇಶಿಸಿದೆ.
ಈ ಸಂಬಂಧ ಪಾರ್ವತಮ್ಮ (52) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ‘ಅರ್ಜಿದಾರರು ಮಾಜಿ ಸೈನಿಕನ ಪತ್ನಿಯಾಗಿದ್ದರೂ, ವಿಚ್ಛೇದಿತೆ ಎಂಬ ಕಳಂಕ ಹೊರಿಸಿ ಅವರಿಗೆ ದಕ್ಕಬೇಕಾದ ಕಾನೂನುಬಾಧ್ಯ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಹಾಗಾಗಿ, ಅವರಿಗೆ ಗುರುತಿನ ಚೀಟಿ ಸೇರಿದಂತೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಮುಂದಿನ ಎರಡು ತಿಂಗಳ ಒಳಗಾಗಿ ಕಲ್ಪಿಸಿ’ ಎಂದು ಇಲಾಖೆಯ ಜಂಟಿ ನಿರ್ದೇಶಕರಿಗೆ ತಾಕೀತು ಮಾಡಿದೆ.
‘ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ಏಕಪಕ್ಷೀಯ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಲಾದ ಅರ್ಜಿಯ ವಿಚಾರಣೆ ಹಂತದಲ್ಲಿ ಪತಿ ಮೃತಪಟ್ಟಿದ್ದಾರೆ. ಇದೇ ಕಾರಣದಿಂದ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ. ಈ ಕಾರಣಕ್ಕಾಗಿಯೇ, ಅರ್ಜಿದಾರರನ್ನು ವಿಚ್ಛೇದಿತೆ ಎಂಬುದಾಗಿ ಗಮನಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ. ಅರ್ಜಿದಾರರ ಪರ ಎಲ್.ಶ್ರೀರಂಗಯ್ಯ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಪರ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ವಾದ ಮಂಡಿಸಿದ್ದರು.
ಪ್ರಕರಣವೇನು?: ಮದುವೆಯಾದ 30 ವರ್ಷಗಳ ಬಳಿಕ ದಂಪತಿ ಮಧ್ಯೆ ತಲೆದೋರಿದ ಮನಸ್ತಾಪದ ಕಾರಣ ಅರ್ಜಿದಾರರ ಪತಿ (ಮಾಜಿ ಸೈನಿಕ) ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಪತ್ನಿ ಕೋರ್ಟ್‌ಗೆ ಯಾವತ್ತೂ ಹಾಜರಾಗಿರಲಿಲ್ಲ. ಹೀಗಾಗಿ, ಕೌಟುಂಬಿಕ ನ್ಯಾಯಾಲಯ ಮಾಜಿ ಸೈನಿಕನಿಗೆ ಏಕಪಕ್ಷೀಯವಾಗಿ ವಿಚ್ಛೇದನ ಡಿಕ್ರಿ ಮಂಜೂರು ಮಾಡಿತ್ತು. ಡಿಕ್ರಿ ಆದೇಶವನ್ನು ಹಿಂಪಡೆಯುವಂತೆ ಪತ್ನಿ ಮಾಡಿದ್ದ ಮನವಿ ವಿಚಾರಣೆ ಹಂತದಲ್ಲಿರುವಾಗ ಮಾಜಿ ಸೈನಿಕ ಮೃತಪಟ್ಟಿದ್ದರು. ಈ ಕಾರಣಕ್ಕಾಗಿ ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
ಏತನ್ಮಧ್ಯೆ ಅರ್ಜಿದಾರ ಪತ್ನಿ, ‘ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ’ಗೆ ಮನವಿ ಸಲ್ಲಿಸಿ, ‘ನಾನು ಮೃತ ಮಾಜಿ ಸೈನಿಕನ ಪತ್ನಿ (ವಿಧವೆ) ಎಂಬ ಹೆಸರಿನ ಗುರುತಿನ ಚೀಟಿ ನೀಡಬೇಕು’ ಎಂದು ಇಲಾಖೆಗೆ ಕೋರಿದ್ದರು. ಇಲಾಖೆ ಕೋರಿಕೆಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.