ಬೆಂಗಳೂರು: ‘ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಕೇಂದ್ರದ ಕಾನೂನು ಮಂತ್ರಿ ಮತ್ತು ಉಪರಾಷ್ಟ್ರಪತಿ ದಿನವೂ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗದ ಘನತೆಯನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಚಟುವಟಿಕೆಗಳು ರಾಷ್ಟ್ರದಲ್ಲಿ ಸರ್ವಾಧಿಕಾರಿ ನಾಯಕತ್ವಕ್ಕೆ ಎಡೆ ಮಾಡಿಕೊಡುತ್ತದೆ’ ಎಂದು ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ.ರಂಗನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಕೇಂದ್ರ ಸರ್ಕಾರದ ಕಾನೂನು ಮಂತ್ರಿಗಳು ಕೊಲಿಜಿಯಂ ಪದ್ಧತಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯೊಬ್ಬರಿಗೆ ಅವಕಾಶ ನೀಡಬೇಕು ಎಂದು ಪತ್ರದ ಮೂಲಕ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳನ್ನು ಒತ್ತಾಯಿಸಿರುವ ನಡೆ ತಕ್ಕುದಾದ ಕ್ರಮವಲ್ಲ. ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಅನವಶ್ಯಕ ಮೂಗು ತೂರಿಸಲು ಅವಕಾಶವಿಲ್ಲ. ಕೊಲಿಜಿಯಂ ಆಯ್ಕೆ ಮಾಡಿದ ಹೆಸರುಗಳನ್ನು ಅಂಗೀಕರಿಸುವುದಷ್ಟೇ ಕೇಂದ್ರ ಸರ್ಕಾರದ ಕೆಲಸ’ ಎಂದು ಅವರು ಹೇಳಿದ್ದಾರೆ.
‘ತಮ್ಮ ಇಷ್ಟದ ಮತ್ತು ತಮ್ಮ ಸಿದ್ಧಾಂತಗಳನ್ನು ಪ್ರತಿಶತ ನೂರರಷ್ಟು ಬೆಂಬಲಿಸುವ ವ್ಯಕ್ತಿಗಳನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೇಂದ್ರಕ್ಕೆ ಸಾಧ್ಯವಿಲ್ಲದಂತಾಗಿದೆ. ಇದು ಸರ್ಕಾರದ ಅಸಹನೆಗೆ ಕಾರಣವಾಗಿದೆ’ ಎಂದು ರಂಗನಾಥ್ ಆರೋಪಿಸಿದ್ದಾರೆ.
‘ಕೇಂದ್ರ ಸರ್ಕಾರ ನ್ಯಾಯಾಂಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಪಮಾರ್ಗದಲ್ಲಿ ಹೆಜ್ಜೆಯಿರಿಸಿದೆ. ನ್ಯಾಯಾಂಗದ ಸ್ವಾಯತ್ತತೆ ಮೇಲಿನ ಈ ದಾಳಿಯನ್ನು ಭಾರತೀಯರೆಲ್ಲರೂ ಖಂಡಿಸಬೇಕಿದ್ದು, ತನ್ಮೂಲಕ ಸಂವಿಧಾನವನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಭಾರತೀಯ ವಕೀಲರ ಪರಿಷತ್, ಸರ್ವ ರಾಜ್ಯಗಳ ವಕೀಲರ ಪರಿಷತ್ ಮತ್ತು ವಕೀಲರ ಸಂಘಗಳು ಮುಂದಾಗಿ ಪ್ರತಿಭಟನೆಯನ್ನು ದಾಖಲಿಸಬೇಕಾದದ್ದು ತುರ್ತು ಅಗತ್ಯವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಭಾರತದ ಸಂವಿಧಾನವು ಸ್ವಾಯತ್ತ ನ್ಯಾಯಾಂಗ ವ್ಯವಸ್ಥೆಯ ಪರವಾಗಿದೆ. ನ್ಯಾಯಾಂಗದ ದೈನಂದಿನ ವ್ಯವಹಾರ, ನ್ಯಾಯಮೂರ್ತಿಗಳ ನೇಮಕ, ಪದೋನ್ನತಿ, ವರ್ಗಾವಣೆ ಮುಂತಾದ ವಿಚಾರಗಳ ಕುರಿತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಹಿರಿಯ ನ್ಯಾಯಮೂರ್ತಿಗಳ ಸಮಿತಿಯಾದ ಕೊಲಿಜಿಯಂ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದರೆ; ರಾಜಕೀಯ ಪಕ್ಷಗಳು, ವ್ಯಕ್ತಿಗಳು ಅಧಿಕಾರ ನಡೆಸುವಾಗ ಎಲ್ಲಾ ವ್ಯವಸ್ಥೆಗಳು, ಸಂಸ್ಥೆಗಳು ಹಾಗೂ ಎಲ್ಲರೂ ತಮ್ಮ ಅಧೀನರಾಗಿಯೇ ಇರಬೇಕೆಂದು ಬಯಸುತ್ತವೆ. ಇಂತಹ ಬಯಕೆ ಪ್ರಜಾತಂತ್ರ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ’ ಎಂದು ಅವರು ಎಚ್ಚರಿಸಿದ್ದಾರೆ.
‘ಈ ಹಿಂದೆ ತುರ್ತು ಪರಿಸ್ಥಿತಿ ಘೋಷಣೆಗೂ ಮುನ್ನ ಅಂದಿನ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸೇವಾ ಹಿರಿತನವನ್ನು ಕಡೆಗಣಿಸಿ ತನ್ನಿಚ್ಛೆಯ ಕಿರಿಯ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಿತು. ಈ ಧೋರಣೆಯನ್ನು ಖಂಡಿಸಿ ಸುಪ್ರೀಂ ಕೋರ್ಟಿನ ಹಲವು ನ್ಯಾಯಮೂರ್ತಿಗಳು ರಾಜೀನಾಮೆ ಸಲ್ಲಿಸಿ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿದರು. ಈ ತಪ್ಪಿಗೆ ಅಂದಿನ ಸರ್ಕಾರ ಮುಂದಿನ ದಿನಗಳಲ್ಲಿ ಸೂಕ್ತ ಬೆಲೆ ತೆರಬೇಕಾಯಿತು ಎಂಬುದು ಇತಿಹಾಸ’ ಎಂದು ರಂಗನಾಥ್ ಸ್ಮರಿಸಿದ್ದಾರೆ.
ನುಂಗಲಾರದ ತುತ್ತು
‘ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಿಬಿಐ, ಇಡಿ, ಚುನಾವಣಾ ಆಯೋಗ, ಆದಾಯ ತೆರಿಗೆ, ರಿಸರ್ವ್ ಬ್ಯಾಂಕ್ ಮುಂತಾದ ಇಲಾಖೆಗಳ ಮುಖ್ಯಸ್ಥರ ಹುದ್ದೆಗಳ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ತನ್ನಿಷ್ಟದ ವ್ಯಕ್ತಿಗಳನ್ನು ನೇಮಿಸುವುದು, ಅದರಲ್ಲಿ ಹಲವರನ್ನು ನಿವೃತ್ತಿಯ ನಂತರ ಮುಂದುವರೆಸಿರುವುದು... ಹೀಗೆ ಇನ್ನೂ ಅನೇಕ ಅಪ್ರಜಾಪ್ರಭುತ್ವಕ ಮತ್ತು ಮತ್ತು ಅಸಂವೈಧಾನಿಕ ನಡೆಯ ಜನವಿರೋಧಿ ಕಾಯ್ದೆಗಳ ಬಗ್ಗೆ ನ್ಯಾಯಾಂಗ ವಿಶೇಷ ಸಂವಿಧಾನ ಪೀಠಗಳನ್ನು ರಚಿಸಿ ವಿಚಾರಣೆ ಆರಂಭಿಸಿರುವುದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಂತೆಯೇ, ಕೊಲಿಜಿಯಂ ಶಿಫಾರಸುಗಳನ್ನು ಜಾರಿ ಮಾಡದೇ ಇರುವ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರು ವಕೀಲರ ಸಂಘವು ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನೂ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವುದು ಕೇಂದ್ರದ ತಳಮಳಕ್ಕೆ ಮತ್ತೊಂದು ಕಾರಣವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.