ADVERTISEMENT

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ: ಸುತ್ತೂರಲ್ಲಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 13:46 IST
Last Updated 9 ಫೆಬ್ರುವರಿ 2024, 13:46 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಫೆ.11ರಂದು ಸುತ್ತೂರಿನಲ್ಲಿ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಭದ್ರತೆಯ ಹಿತದೃಷ್ಟಿಯಿಂದ ಕೆಲವು ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಆಯೋಜಕರಿಗೆ ಸೂಚನೆ ನೀಡಿದ್ದಾರೆ.

ಖಾಸಗಿ ವಾಹನಗಳಿಗೆ ಕಪಿಲಾ ನದಿಯ ಸೇತುವೆಯ ಮುಂಚೆಯೇ ಭತ್ತದ ಗದ್ದೆಗಳಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕಪಿಲಾ ನದಿ ಸೇತುವೆಯ ಮೇಲೆ ಆಯ್ದ ವಾಹನಗಳಿಗೆ ಮಾತ್ರವೇ ಪ್ರವೇಶ ಇರಲಿದೆ. ಮಠದ ಕರ್ತೃ ಗದ್ದುಗೆಯ ಬಳಿಯ ವೇದಿಕೆಯಲ್ಲಿ ಸಮಾರಂಭ ನಡೆಯಲಿದೆ.

ADVERTISEMENT

ಅಂದು ಮಧ್ಯಾಹ್ನ 12ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ, ಪಾರ್ವತಮ್ಮ ಮತ್ತು ಶಾಮನೂರು ಶಿವಶಂಕರಪ್ಪ ಅತಿಥಿ ಗೃಹವನ್ನು ಕೇಂದ್ರ ಸಚಿವರು ಉದ್ಘಾಟಿಸಲಿದ್ದಾರೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಈ ಮುನ್ನ ಕಾರ್ಯಕ್ರಮ ಫೆ.10ರಂದು ನಿಗದಿಯಾಗಿತ್ತು. ಆದರೆ, ಅಂದು ಅಧಿವೇಶನ ಮುಂದುವರಿದ ಕಾರಣ ಒಂದು ದಿನ ಮುಂದೂಡಲಾಗಿದೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದವರು ನಿರ್ಮಿಸಿಕೊಟ್ಟಿರುವ ಅತಿಥಿ ಗೃಹ ಇದಾಗಿದೆ. ಇದಕ್ಕಾಗಿ ₹ 12 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 4 ಮಹಡಿಗಳ ಈ ಅತಿಥಿಗೃಹವು 50 ಕೊಠಡಿಗಳನ್ನು ಹೊಂದಿದ್ದು, 700 ಜನರಿಗೆ ವಸತಿ ಸೌಲಭ್ಯ ಕಲ್ಪಿಸಬಹುದಾಗಿದೆ.

ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರೊಂದಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕೂಡ ಪಾಲ್ಗೊಳ್ಳುತ್ತಿರುವುದ ವಿಶೇಷ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಪಾಲ್ಗೊಳ್ಳಲಿದ್ದಾರೆ.

ಸುತ್ತೂರಿನಲ್ಲಿ ನಿರ್ಮಿಸಿರುವ ಪಾರ್ವತಮ್ಮ ಮತ್ತು ಶಾಮನೂರು ಶಿವಶಂಕರಪ್ಪ ಅತಿಥಿ ಗೃಹ

ಅಮಿತ್ ಶಾ ಪ್ರವಾಸ ಇಂತಿದೆ

ಮೈಸೂರು: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಫೆ.10ರಂದು ರಾತ್ರಿ 10.50ಕ್ಕೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

11ರಂದು ಬೆಳಿಗ್ಗೆ 11ಕ್ಕೆ ಚಾಮುಂಡಿ ಬೆಟ್ಟಕ್ಕೆ ತೆರಳುವರು. ಮಧ್ಯಾಹ್ನ 12ಕ್ಕೆ ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವರು.

ಮಧ್ಯಾಹ್ನ 2.35ಕ್ಕೆ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಸಭೆ ನಡೆಸುವರು. ಸಂಜೆ 4.55ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿನಿಂದ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.