ADVERTISEMENT

ಹೆದರಿದ್ದು ನಾನಲ್ಲ, ಸಿಎಂ; ಸುಳ್ಳು ಆರೋಪಗಳಿಗೆ ಉತ್ತರ ನೀಡಿದ್ದೇನೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 12:15 IST
Last Updated 23 ಆಗಸ್ಟ್ 2024, 12:15 IST
<div class="paragraphs"><p>ಎಚ್. ಡಿ. ಕುಮಾರಸ್ವಾಮಿ</p></div>

ಎಚ್. ಡಿ. ಕುಮಾರಸ್ವಾಮಿ

   

ಬೆಂಗಳೂರು: 'ಹೆದರಿದ್ದು ನಾನಲ್ಲ, ಸಿಎಂ ಸಿದ್ದರಾಮಯ್ಯ ಅವರು. ನನ್ನ ವಿರುದ್ಧ ಸುಳ್ಳು ಸೃಷ್ಟಿ ಮಾಡೋರಿಗೆ, ಸುಳ್ಳು ಆರೋಪಗಳಿಗೆ ಉತ್ತರ ನೀಡಿದ್ದೇನೆ' ಎಂದು 'ಡೆಕ್ಕನ್ ಹೆರಾಲ್ಡ್‌'ಗೆ ನೀಡಿದ ಸಂದರ್ಶನವನ್ನು ಉಲ್ಲೇಖಿಸುತ್ತಾ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಡೆಕ್ಕನ್ ಹೆರಾಲ್ಡ್ ಸಂದರ್ಶನದ ವಿವರ ಹಂಚಿರುವ ಅವರು, 'ಕುಮಾರಸ್ವಾಮಿ ಹೆದರಿಕೊಂಡು ಮಾಧ್ಯಮಗೋಷ್ಠಿ ನಡೆಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೂ ತಿರುಗೇಟು ಕೊಟ್ಟಿದ್ದೇನೆ' ಎಂದು ಹೇಳಿದ್ದಾರೆ.

ADVERTISEMENT

'ಹೆದರಿದ್ದು ನಾನಲ್ಲ, ಸಿದ್ದರಾಮಯ್ಯ ಅವರು. ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುತ್ತಿದ್ದಂತೆಯೇ ಹಿಂದೆ-ಮುಂದೆ ಪಟಾಲಂ ಕಟ್ಟಿಕೊಂಡು ವಿಧಾನಸೌಧದ 3ನೇ ಮಹಡಿಯಲ್ಲಿ ಸಾಲು ಸಾಲು ಮಾಧ್ಯಮಗೋಷ್ಠಿಗಳನ್ನು ನಡೆಸಿದ್ದು ಯಾರು? ಸಚಿವರು, ಶಾಸಕರಿಗೆ ನನ್ನ ವಿರುದ್ಧ ಸರಣಿ ಟೀಕೆ, ಮಾಧ್ಯಮಗೋಷ್ಠಿ ನಡೆಸಲು ಸುಪಾರಿ ಕೊಟ್ಟಿದ್ದು ಯಾರು?' ಎಂದು ಕೇಳಿದ್ದಾರೆ.

ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ?

'ಸಿಎಂ ಸಿದ್ದರಾಮಯ್ಯನವರೇ, ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ. ನೀವು ಸ್ವಯಂಘೋಷಿತ ವಕೀಲರಲ್ಲವೇ? ಇಲ್ಲಿರುವ ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ' ಎಂದು ಕುಮಾರಸ್ವಾಮಿ ಮಗದೊಂದು ಪೋಸ್ಟ್‌ನಲ್ಲಿ ದಾಖಲೆಯನ್ನು ಹಂಚಿದ್ದಾರೆ.

'50:50ರ ಅನುಪಾತದಲ್ಲಿಯೇ ಮೂಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ 'ಒತ್ತಾಯ' ಮಾಡಿದ್ದಾರೆ!!' 'ಅರ್ಜಿದಾರರಾದ ಶ್ರೀಮತಿ ಪಾರ್ವತಮ್ಮ ಇವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ತಿಳಿಸಲಾಗಿತ್ತು. ಆದರೆ ಪ್ರಾಧಿಕಾರದ ಈ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನು ನೀಡುವಂತೆ ಒತ್ತಾಯಿಸಿರುತ್ತಾರೆ.' ಎಂದು ಹೇಳಿದ್ದಾರೆ.

'ಇದು ಮೂಡಾ ದಾಖಲೆಯಲ್ಲಿರುವ ಒಕ್ಕಣೆ. ಇದಕ್ಕೆ ತಾವು ಏನಂತೀರಿ? ಇದು ತಮ್ಮ ಪ್ರಕಾರ ಟಿಪ್ಪಣಿಯೋ..? ಒಕ್ಕಣೆಯೋ..? ಅಥವಾ ಅಪ್ಪಣೆಯೋ..? ಸೂಪರ್ ಸಿಎಂ ಅವರೇ 'ಒತ್ತಾಯಿಸಿರುತ್ತಾರೆ!!! ಎಂದರೆ ಮೂಡಾ ಅಧಿಕಾರಿಗಳು ಇನ್ನೇನು ಮಾಡಿಯಾರು?' ಎಂದು ಕೇಳಿದ್ದಾರೆ.

'ಆಗ ತಾವು ರಾಜ್ಯದಲ್ಲಿ ಏನಾಗಿದ್ದಿರಿ? ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಿರಿ. ಈಗ ಹೇಳಿ.. ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ? ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ..??' ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.