ಮೈಸೂರು: ‘ರಾಜ್ಯ ಸರ್ಕಾರ ಅತಂತ್ರಗೊಳ್ಳಲು ಇನ್ನೂ ಕಾಲವಿದೆ. ಯಾರಾದರೂ ಮುಟ್ಟಿದರೆ ಜನರು ದಂಗೆ ಏಳುತ್ತಾರೆಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ದೇಶ ಲೂಟಿ ಮಾಡುತ್ತಿದ್ದರೂ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹87 ಕೋಟಿ ಹಗರಣ ನಡೆಸಿದವರನ್ನು ಜನರು ಆರಾಧಿಸುತ್ತಾರೆಯೇ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಕೇರ್ಗಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್ ತನಿಖೆ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಅವರು ಕೆಂಪ್ಪಣ್ಣ ಆಯೋಗದ ವರದಿ ಇಟ್ಟುಕೊಂಡು ಇನ್ನೂ ಏನು ಮಾಡುತ್ತಿದ್ದಾರೆ. ನೈಸ್ ರಸ್ತೆ ಯೋಜನೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅವರ ಸದನ ಸಮಿತಿಯೇ ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲವೇಕೆ’ ಎಂದು ಪ್ರಶ್ನಿಸಿದರು.
‘ಇ.ಡಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆಯೆಂದು ಆರೋಪಿಸುವವರು ರಾಜ್ಯ ಪೊಲೀಸ್ ಇಲಾಖೆಯನ್ನು ಯಾವ ಮಟ್ಟಕ್ಕಿಳಿಸಿದ್ದಾರೆಂದು ಗೊತ್ತು. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದವರನ್ನೂ ಬಂಧಿಸಲಾಗುತ್ತಿದೆ. ನನ್ನ ಹಾಗೂ ನಿಖಿಲ್ ಮೇಲೂ ಎಫ್‌ಐಆರ್ ಹಾಕಲಾಗಿದೆ. ಇದುವರೆಗೂ ಯಾವುದಾದರೂ ಒಂದು ಆರೋಪವನ್ನು ಅವರು ಸಾಬೀತು ಮಾಡಿದ್ದಾರೆಯೇ’ ಎಂದರು.
‘₹50 ಕೋಟಿ ನೀಡಿ 50ಕ್ಕೂ ಹೆಚ್ಚು ಶಾಸಕರನ್ನು ಖರೀದಿಸುತ್ತಿದ್ದಾರೆಂದು ಚನ್ನಗಿರಿ, ಮಂಡ್ಯ ಶಾಸಕರು ಲೋಕಸಭಾ ಚುನಾವಣೆಗೂ ಮೊದಲೇ ಹೇಳಿದ್ದರು. ಆಮಿಷವೊಡ್ಡಿದವರ ಬಗ್ಗೆ ಅವರೇ ಮುಖ್ಯಮಂತ್ರಿ ಗಮನಕ್ಕೆ ತರಬಹುದಿತ್ತು. ಪಕ್ಕದ ತೆಲಂಗಾಣದಲ್ಲಿ ಆಮಿಷವೊಡ್ಡಿದವರನ್ನು ಬಂಧಿಸಲಿಲ್ಲವೇ? ಇಲ್ಲೂ ಅದೇ ರೀತಿ ಕ್ರಮ ವಹಿಸಬಹುದಿತ್ತು. ಮಾತೆತ್ತಿದ್ದರೆ ಎಸ್‌ಐಟಿ ಎನ್ನುವವರು ಈ ಬಗ್ಗೆ ತನಿಖೆ ನಡೆಸಲಿಲ್ಲವೇಕೆ’ ಎಂದು ಪ್ರಶ್ನಿಸಿದರು.
‘ಆ ವ್ಯಕ್ತಿ ಹೆಸರು ಹೇಳಬೇಡಿ. ಆ ಮೂರು–ನಾಲ್ಕು ಜನರೊಂದಿಗೆ ನಾನು ಇದ್ದದ್ದು ನನ್ನ ಬದುಕಿನ ಕರಾಳ ದಿನ. ಅವರ ಬಗ್ಗೆ ಎಚ್ಚರಿಕೆಯಿಂದ ಇದ್ದೇನೆ. ದೇವೇಗೌಡರ ಖಾಂದಾನ್ ಕೊಂಡುಕೊಳ್ಳುತ್ತೇವೆ ಎಂದವರು ಯಾವ ಮಟ್ಟಕ್ಕೆ ಬೆಳೆದಿರಬೇಕು ಎಂಬುದುನ್ನು ಲೆಕ್ಕಹಾಕಬೇಕು. ಅವರು ನನಗೆ ಮೋಸ ಮಾಡಿದ ದಿನ ಏನು ಹೇಳಿದ್ದರೆಂಬುದನ್ನು ಮೆಕ್ಕಾಗೆ ಹೋಗಿ ಪ್ರಾರ್ಥನೆ ಮಾಡಿ ನೆನೆಸಿಕೊಳ್ಳಲಿ’ ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.