ADVERTISEMENT

ಗೌಡರ ಆಸ್ತಿ ಮೌಲ್ಯ ಬಿಚ್ಚಿಡು: ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್‌ ಸವಾಲು

‘ಕೈ’ ಜನಾಂದೋಲನ: ಎಚ್‌.ಡಿ. ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್‌ ಸವಾಲು

ಜಯಸಿಂಹ ಆರ್.
Published 3 ಆಗಸ್ಟ್ 2024, 0:30 IST
Last Updated 3 ಆಗಸ್ಟ್ 2024, 0:30 IST
<div class="paragraphs"><p>ಕಾಂಗ್ರೆಸ್‌ ಜನಾಂದೋಲನ ಸಭೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹಮದ್‌, ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಡಾ ಎಂ. ಸಿ. ಸುಧಾಕರ್ ಪಾಲ್ಗೊಂಡಿದ್ದರು</p></div>

ಕಾಂಗ್ರೆಸ್‌ ಜನಾಂದೋಲನ ಸಭೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹಮದ್‌, ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಡಾ ಎಂ. ಸಿ. ಸುಧಾಕರ್ ಪಾಲ್ಗೊಂಡಿದ್ದರು

   

(ಪ್ರಜಾವಾಣಿ ಚಿತ್ರ/ ಎಂ. ಎಸ್. ಮಂಜುನಾಥ್)

ಬೆಂಗಳೂರು: ‘ಎಚ್‌.ಡಿ.ದೇವೇಗೌಡ ಮತ್ತು ಅವರ ಕುಟುಂಬದ ಆಸ್ತಿಯ ಮೂಲ ಮತ್ತು ಮೌಲ್ಯದ ವಿವರಗಳನ್ನು ಎಚ್‌.ಡಿ.ಕುಮಾರಸ್ವಾಮಿ ಬಿಚ್ಚಿಡಬೇಕು. ಇಲ್ಲದೇ ಇದ್ದಲ್ಲಿ ಅದನ್ನು ನಾನೇ ಬಯಲು ಮಾಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಬ್ಬರಿಸಿದರು.

ADVERTISEMENT

ಕೇತಮಾರನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟದ ಮನೆಯಿಂದ ಕೆಲವೇ ಕಿ.ಮೀ ದೂರ ದಲ್ಲಿರುವ ಬಿಡದಿಯಲ್ಲಿ ಕಾಂಗ್ರೆಸ್‌ನ ಜನಾಂದೋಲನ ಸಭೆಗೆ ಶುಕ್ರವಾರ ಚಾಲನೆ ನೀಡಿದ ಅವರು, ಭಾಷಣದುದ್ದಕ್ಕೂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ಅವರ ಮಾತುಗಳಿಗೆ ಜನರು ದನಿಗೂಡಿಸಿದರು.

‘ದೇವೇಗೌಡ ಅವರು ರಾಮನಗರ ದಲ್ಲಿ ರಾಜಕಾರಣ ಆರಂಭಿಸಿದಾಗ ಅವರ ಆಸ್ತಿ ಎಷ್ಟಿತ್ತು ಮತ್ತು ಈಗ ಅವರ ಕುಟುಂಬದ ಆಸ್ತಿ ಎಷ್ಟಿದೆ? ಕುಂಬಳಗೋಡು ಬಳಿಯ 250 ಎಕರೆ, ಚಿಕ್ಕಗುಬ್ಬಿ–ದೊಡ್ಡಗುಬ್ಬಿಯ ಜಮೀನು, ನೆಲಮಂಗಲದ ಜಮೀನುಗಳು ಮತ್ತು ಹಾಸನದಲ್ಲಿನ ಆಸ್ತಿಗಳು ಬಂದದ್ದು ಹೇಗೆ ಎಂಬುದನ್ನು ವಿವರಿಸುತ್ತೀಯಾ ಕುಮಾರಸ್ವಾಮಿ’ ಎಂದು ಸವಾಲೆಸೆದರು.

‘ನಿನ್ನ ಸೋದರ ಬಾಲಕೃಷ್ಣೇಗೌಡ ಒಬ್ಬ ಸರ್ಕಾರಿ ನೌಕರ. ಆತನ ಆಸ್ತಿಯ ಮೌಲ್ಯ ಸಾವಿರ ಕೋಟಿ ದಾಟುತ್ತದೆ. ಅದೆಲ್ಲಾ ಹೇಗೆ ಬಂತು ಎಂಬುದನ್ನು ನೀನೇ ವಿವರಿಸುತ್ತೀಯಾ? ನೀನು ಬಹಿರಂಗ
ಪಡಿಸದಿದ್ದರೆ ನಾನೇ ಬಹಿರಂಗಪಡಿಸುತ್ತೇನೆ’ ಎಂದು ಗುಡುಗಿದರು.

‘ಬಿಜೆಪಿ ಆಡಳಿತದಲ್ಲಿ ಬೋವಿ ನಿಗಮದಲ್ಲಿ ₹87 ಕೋಟಿ ಅಕ್ರಮ, ಕೃಷಿ ಮಾರುಕಟ್ಟೆ ಯೋಜನೆಯಲ್ಲಿ ₹47 ಕೋಟಿ ಅಕ್ರಮ ನಡೆದಿದೆ. ಇದನ್ನೆಲ್ಲಾ ನೀವು ಅಧಿಕಾರದಲ್ಲಿ ಇದ್ದಾಗಲೇ ತನಿಖೆಗೆ ಏಕೆ ನೀಡಲಿಲ್ಲ. ಈ ಎಲ್ಲ ಪ್ರಶ್ನೆಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಕುಮಾರಣ್ಣ, ಅಶೋಕ, ವಿಜಯೇಂದ್ರ ಮತ್ತು ಸಿ.ಟಿ. ರವಿ ನೀನೂ ಸೇರಿ ಇದಕ್ಕೆಲ್ಲಾ ಉತ್ತರ ಕೊಡಬೇಕು. ನಾಳೆ ಪಾದಯಾತ್ರೆಯಲ್ಲಿ ಇಲ್ಲಿಗೆ ಬರುತ್ತೀರಲ್ಲಾ, ಆಗ ಉತ್ತರ ಕೊಟ್ಟು ಮುಂದಕ್ಕೆ ಹೋಗಿ’ ಎಂದರು.

ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮಗಳ ಅಧ್ಯಕ್ಷರು, ವಿವಿಧ ಸಮಿತಿಗಳ ಅಧ್ಯಕ್ಷರು ಸೇರಿ ಕಾಂಗ್ರೆಸ್‌ನ 20ಕ್ಕೂ ಹೆಚ್ಚು ನಾಯಕರು ಕಾರ್ಯಕ್ರಮ
ದಲ್ಲಿ ಭಾಗಿಯಾಗಿದ್ದರು. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ದ್ವೇಷ ರಾಜಕಾರಣ ಮಾಡುತ್ತಿವೆ. ಅದನ್ನು ಸಹಿಸುವುದಿಲ್ಲ ಎಂದು ಘೋಷಿಸಿದರು.

‘ಏಯ್‌ ವಿಜಯೇಂದ್ರ, ಹೆಸರು ಹೇಳುವ ತಾಕತ್ತಿದೆಯಾ?’

‘ಮುಡಾ ಹಗರಣದ ಸಂಬಂಧ ಪಾದಯಾತ್ರೆಗೆ ಕಾಂಗ್ರೆಸ್ಸಿಗರೇ ಕುಮ್ಮಕ್ಕು ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾನೆ. ನನ್ನ ಬಗ್ಗೆ ಏನೇನೋ ಮಾತನಾಡಿದ್ದಾನೆ. ಏಯ್‌ ವಿಜಯೇಂದ್ರ, ನಿನಗೆ ತಾಕತ್ತಿದ್ದರೆ ಕುಮ್ಮಕ್ಕು ನೀಡಿದವರ ಹೆಸರು ಹೇಳು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಶಿವಕುಮಾರ್ ಸವಾಲು ಹಾಕಿದರು.

ಜನಾಂದೋಲನ ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಜಯೇಂದ್ರ, ನಿಮ್ಮಪ್ಪ ನನ್ನನ್ನು ಜೈಲಿಗೆ ಹಾಕಿಸಿದ್ದ. ಇ.ಡಿ ತನಿಖೆಗೆ ಅನುಮತಿ ನೀಡಿದ್ದ. ನನ್ನ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು ಎಂಬುದು ನಿನಗೆ ಗೊತ್ತಾ? ಪತ್ರಿಕಾಗೋಷ್ಠಿಯಲ್ಲಿ ಏನೇನೋ ಮಾತನಾಡುವುದಲ್ಲ. ಗಂಡಸೇ ಆಗಿದ್ದರೆ, ನಾನು ಮಹಾಭ್ರಷ್ಟ ಎಂಬುದಕ್ಕೆ ದಾಖಲೆ ಬಿಡುಗಡೆ ಮಾಡಬೇಕು. ನಿನ್ನದು ಏನೇನು ಇದೆಯೋ ಅದೆಲ್ಲವನ್ನೂ ಬಿಚ್ಚಿಸುತ್ತೇನೆ’ ಎಂದರು.

‘ಜೆಡಿಎಸ್ ಬಾವುಟ ಎಲ್ಲಿ ಕುಮಾರಣ್ಣ’

‘ಅಣ್ಣಾ ಕುಮಾರಣ್ಣ, ನಾವೆಲ್ಲರೂ ಒಪ್ಪಿ ನಿನಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದೆವು. ಅದನ್ನು ಬಿಟ್ಟುಹೋದೆ. ಈಗ ಕೆಂಗೇರಿಯಿಂದ ಇಲ್ಲಿಗೆ ಬರುತ್ತಾ ದಾರಿಯುದ್ದಕ್ಕೂ ಬಿಜೆಪಿ ಬಾವುಟಗಳಷ್ಟೇ ಕಾಣುತ್ತಿವೆ. ಜೆಡಿಎಸ್‌ನ ಒಂದೂ ಬಾವುಟ ಇಲ್ಲ. ಕೇಂದ್ರದಲ್ಲಿ ಮಂತ್ರಿಗಿರಿ ಕೊಟ್ಟಿದ್ದಾರೆ ಎಂದು ನಿ‌ನ್ನ ಸ್ವಾರ್ಥಕ್ಕಾಗಿ ಪಕ್ಷವನ್ನೇ ಬಲಿಕೊಡುತ್ತಿದ್ದೀಯಲ್ಲಾ’ ಎಂದು ಶಿವಕುಮಾರ್ ಲೇವಡಿ ಮಾಡಿದರು.

‘ನಿಮ್ಮ ಅಪ್ಪ ಇಲ್ಲಿಂದಲೇ ಗೆದ್ದು ಪ್ರಧಾನಿ, ಮುಖ್ಯಮಂತ್ರಿ ಆದರು. ನೀನು ಶಾಸಕ, ಮುಖ್ಯಮಂತ್ರಿ, ಸಂಸದ, ಕೇಂದ್ರ ಮಂತ್ರಿ ಎಲ್ಲ ಆಗಿದ್ದೀಯ. ಇಷ್ಟೆಲ್ಲಾ ಪಡೆದುಕೊಂಡಿದ್ದರೂ ಇಲ್ಲಿನ ಜನ ಮತ್ತು ನಿನ್ನ ಪಕ್ಷವನ್ನೇ ಬಲಿಕೊಡುತ್ತಿದ್ದೀಯ’ ಎಂದರು.

ಜಿ.ಪರಮೇಶ್ವರ, ‘ಒಂದು ಬಾವುಟವೇ ಇಲ್ಲದೆ ಜೆಡಿಎಸ್‌ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದೆ. ಬಿಜೆಪಿ–ಜೆಡಿಎಸ್‌ನ ಈ ಕೂಡಿಕೆ–ಮದುವೆ ಬಹಳ ದಿನ ಉಳಿಯುವುದಿಲ್ಲ’ ಎಂದು ಹಂಗಿಸಿದರು.

ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಎಲ್ಲಾದರೂ ಸಹಿ ಮಾಡಿದ್ದಾರೆಯೇ ಅಥವಾ ಯಾವುದಾದರೂ ನಿರ್ದೇಶನ ನೀಡಿದ್ದಾರೆಯೇ? ಇದ್ದರೆ ತೋರಿಸಿ. ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇವೆ
-ಜಿ.ಪರಮೇಶ್ವರ, ಗೃಹ ಸಚಿವ
ಮುಖ್ಯಮಂತ್ರಿ ಎಳ್ಳಷ್ಟೂ ತಪ್ಪು ಮಾಡಿಲ್ಲ. ಜನತಂತ್ರದ ಮೂಲಕ ಆಯ್ಕೆಯಾಗಿರುವ ಈ ಸರ್ಕಾರವನ್ನು ಉರುಳಿಸಲು ಬಿಜೆಪಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ
-ಡಾ.ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವ
ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಸಹಿಸಲಾಗದೆ ಕುತಂತ್ರದ ಪಾದಯಾತ್ರೆ ಮಾಡುತ್ತಿದ್ದಾರೆ. ಸಿ.ಎಂ ಆಗಿದ್ದಾಗಲೇ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ವಿಜಯೇಂದ್ರ ಅದನ್ನು ಮರೆಯಬಾರದು
-ಜಮೀರ್‌ ಅಹಮದ್‌ ಖಾನ್‌, ವಸತಿ ಸಚಿವ
ಮುಡಾದಿಂದ ಅತಿಹೆಚ್ಚು ನಿವೇಶನಗಳನ್ನು ಪಡೆದುಕೊಂಡಿದ್ದು ಎಚ್‌.ಡಿ.ದೇವೇಗೌಡರ ಕುಟುಂಬ, ಜೆಡಿಎಸ್‌ ನಾಯಕರು. ಹೀಗಾಗಿಯೇ, ಪಾದಯಾತ್ರೆಗೆ ಜೆಡಿಎಸ್‌ ಹಿಂದೇಟು ಹಾಕಿತ್ತು
-ಎಚ್‌.ಎಂ.ರೇವಣ್ಣ, ಅಧ್ಯಕ್ಷ, ಗ್ಯಾರಂಟಿಗಳ ಅನುಷ್ಠಾನ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.