ADVERTISEMENT

ನೇಮಕಾತಿಯಲ್ಲಿ ಖಂಡ್ರೆ ಹಸ್ತಕ್ಷೇಪ: ಕೇಂದ್ರ ಸಚಿವ ಖೂಬಾ ಖಂಡನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 13:09 IST
Last Updated 17 ಆಗಸ್ಟ್ 2023, 13:09 IST
   

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಖಂಡನಾರ್ಹ. ಇದರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು, ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಖಂಡ್ರೆಯವರು ಉಸ್ತುವಾರಿ ಸಚಿವರಾದ ನಂತರ ಅಧಿಕಾರಿಗಳನ್ನು ಅವರ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಇದು ಆಡಳಿತ ವ್ಯವಸ್ಥೆಗೆ ಮಾರಕ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹೊರಗುತ್ತಿಗೆ ಹುದ್ದೆಗಳ ವಿವರ ನೀಡಿದ ನಂತರ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆದಿದ್ದಾರೆ. ಅದರಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ. ಅವರು, ಖಂಡ್ರೆಯವರ ಗಮನಕ್ಕೆ ತಂದ ನಂತರ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆದಿದ್ದಾರೆ. ಅನುಷ್ಠಾನ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಶೋಚನೀಯ ಸಂಗತಿ. ಅಧಿಕಾರಿಗಳು ಎಷ್ಟು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆ, ತಾನಾಶಾಹಿ ಆಡಳಿತಕ್ಕೆ ಇದು ಸಾಕ್ಷಿಯಾಗಿದೆ. ಕಾಂಗ್ರೆಸ್‌ ಸಂಸ್ಕೃತಿ ಹೇಗಿದೆ ಎನ್ನುವುದನ್ನು ಇದು ಎತ್ತಿ ತೋರಿಸುತ್ತದೆ.  ಸರ್ಕಾರದ ಯಾವುದೇ ರೀತಿಯ ನೇಮಕಾತಿಗಳು ಪಾರದರ್ಶಕ, ನ್ಯಾಯಸಮ್ಮತವಾಗಿ ನಡೆದರೆ ಬಡವರು, ಅರ್ಹರಿಗೆ ನ್ಯಾಯ ಸಿಗುತ್ತದೆ. ಉಸ್ತುವಾರಿ ಸಚಿವರಾಗಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಬೇಕು. ಆದರೆ, ಖಂಡ್ರೆಯವರಿಗೆ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂದು ಕುಟುಕಿದ್ದಾರೆ.

ADVERTISEMENT

ಉತ್ತಮವಾದ ವ್ಯವಸ್ಥೆ ಹಾಳು ಮಾಡುವುದು, ಕಾನೂನು ಗಾಳಿಗೆ ತೂರುವುದು ಕಾಂಗ್ರೆಸ್‌ ಸಂಸ್ಕೃತಿ. ಜನಪರ ಕಾಳಜಿ ಇದ್ದರೆ ವ್ಯವಸ್ಥೆಯ ಲೋಪದೋಷ ಸರಿಪಡಿಸಬೇಕು. ಆದರೆ, ಖಂಡ್ರೆಯವರ ವಿಷಯದಲ್ಲಿ ಇದು ತದ್ವಿರುದ್ಧ. ಭಾಲ್ಕಿಯಲ್ಲಿ ಸರ್ಕಾರದ ಫಲಾನುಭವಿಗಳ ಆಯ್ಕೆಯಲ್ಲಿ ಯಾವ ತಾರತಮ್ಯವಾಗುತ್ತೋ ಅದೇ ರೀತಿ ಈಗ ಜಿಲ್ಲಾಮಟ್ಟದಲ್ಲಿ ಮುಂದುವರೆಸುವ ಕೀಳುಮಟ್ಟದ ಮನಃಸ್ಥಿತಿ ಮುಂದುವರೆಸಿದ್ದಾರೆ. ಜಿಲ್ಲೆಯ ಯುವಕರು ಈ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಬೇಕು. ಅದನ್ನು ಧಿಕ್ಕರಿಸಲು ಕರೆ ಕೊಡುತ್ತೇನೆ ಎಂದಿದ್ದಾರೆ.

‘ಕೆಟ್ಟ ಸಂಸ್ಕೃತಿ ಬೇಡ’

’ಹುದ್ದೆಗಳ ನೇಮಕಾತಿಯಲ್ಲಿ ಸಚಿವರು ಹಸ್ತಕ್ಷೇಪ ಮಾಡಿ ಪತ್ರ ಬರೆಯಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾವುದೇ ಹಕ್ಕು ಇಲ್ಲ. ಜಿಲ್ಲೆಯ ಅಧಿಕಾರಿಗಳು ಇಂತಹ ಕೆಟ್ಟ ಸಂಸ್ಕೃತಿಗೆ ಅವಕಾಶ ಕಲ್ಪಿಸಬಾರದು. ಒಂದುವೇಳೆ ಕೊಟ್ಟರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ. ಅಧಿಕಾರಿಗಳಿಂದ ಏನಾದರೂ ತಪ್ಪಾದರೆ ಉಸ್ತುವಾರಿ ಸಚಿವರು ನಿಮ್ಮೊಂದಿಗೆ ನಿಲ್ಲುವುದಿಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಸಚಿವ ಭಗವಂತ ಖೂಬಾ ಸಲಹೆ ನೀಡಿದ್ದಾರೆ.

ಪ್ರತಿಯೊಬ್ಬರು ತನ್ನ ಮನೆ ಮುಂದೆ ಬರಬೇಕು. ಒಂದು ಕೆಲಸ ಕೊಡಿಸಿ ಎಂದು ಅಂಗಲಾಚಬೇಕು. ಬಡವರು ಕೈ ಕಾಲು ಬೀಳಬೇಕು ಎನ್ನುವುದು ಈಶ್ವರ ಖಂಡ್ರೆಯವರ ಉದ್ದೇಶವಾಗಿರಬಹುದು. ಖಂಡ್ರೆಯವರ ಮೂಲಕ ಉದ್ಯೋಗ ಗಿಟ್ಟಿಸಿದವರು ಅವರಿಗೆ ಗುಲಾಮರಾಗಿ ದುಡಿಯಬೇಕಾಗುತ್ತದೆ. ನ್ಯಾಯಯುತವಾಗಿ ಕೆಲಸ ನಿರ್ವಹಿಸಲು ಆಗುವುದಿಲ್ಲ ಎನ್ನುವುದನ್ನು ಮರೆಯಬಾರದು ಎಂದು ಒತ್ತಿ ಹೇಳಿದ್ದಾರೆ.

ಖಂಡ್ರೆಯವರು ಉಸ್ತುವಾರಿ ಸಚಿವರಾದಾಗಲೆಲ್ಲಾ ಅಧಿಕಾರಿಗಳಿಗೆ ಬೆಲೆ ಇರುವುದಿಲ್ಲ. ಅಧಿಕಾರಿಗಳ ನಿಷ್ಠೆಯ ಕೆಲಸಕ್ಕೆ ಗೌರವ ಸಿಗುವುದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಸುತ್ತಾರೆ. ಅದನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.