ಕನ್ಯಾಡಿ- ಉಜಿರೆ: 'ದೇಶದ ಸುರಕ್ಷತೆಗೆ ಅಪಾಯ ತಂದೊಡ್ಡುವ ಭಯೋತ್ಪಾದಕ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುವವರನ್ನೂ ಸದೆಬಡಿದು ಮುಗಿಸಬೇಕು' ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಇಲ್ಲಿನ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ರಾಷ್ಟ್ರೀಯ ಧರ್ಮ ಸಂಸದ್ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು.
ಕೆಲವು ಅವಕಾಶವಾದಿ ಜನರು ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಭಯೋತ್ಪಾದನೆ ನಡೆಸುತ್ತಿರುವವರು ಮಾತ್ರವಲ್ಲ ಅವರ ಹಿಂದಿರುವ ಜನರನ್ನೂ ಮುಗಿಸಬೇಕು ಎಂದರು.
ರಾಜಕೀಯದಲ್ಲಿ ರಾಜಧರ್ಮವೇ ಇಲ್ಲವಾಗುತ್ತಿದೆ. ಬಹುಮತವನ್ನು ಹೇಗಾದರೂ ಪಡೆಯಬಹುದು ಎಂಬ ವಾತಾವರಣ ನಿರ್ಮಾಣವಾಗಿದೆ. ಬಹುಮತ ಎಂಬುದು 39 + 79 ಅಥವಾ 113+ 1 ಹೇಗಾದರೂ ಆಗಬಹುದು ಎಂಬಂತಾಗಿದೆ. ಬಹುಮತ ಎಂಬುದು ಸಂಖ್ಯೆಗೆ ಸೀಮಿತವಾಗಬಾರದು. ಅದು ಸಹಮತವೂ ಆಗಿರಬೇಕು ಎಂದು ಹೇಳಿದರು.
ಧರ್ಮ ಈಗ ಭಾಷಣ ಮತ್ತು ಘೋಷಣೆಗೆ ಸೀಮಿತವಾಗಿದೆ. ಮಲಗಿರುವ ಹಿಂದೂ ಸಮಾಜವನ್ನು ಎಚ್ಚರಿಸಲು ಧರ್ಮ ಸಂಸದ್ ನಡೆಯುತ್ತಿದೆ. ಹಿಂದೂ ಧರ್ಮ ಆಧಾರಿತ ರಾಷ್ಟ್ರ ನಿರ್ಮಾಣದ ಸಂದೇಶ ಇಲ್ಲಿಂದ ರವಾನೆಯಾಗಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.