ADVERTISEMENT

ನನ್ನ ಮೇಲಿನ ದ್ವೇಷಕ್ಕೆ ಕೆಐಒಸಿಎಲ್‌ಗೆ ತೊಂದರೆ ಕೊಡುತ್ತಿರುವುದೇಕೆ?: ಎಚ್‌ಡಿಕೆ

ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 9:59 IST
Last Updated 5 ಸೆಪ್ಟೆಂಬರ್ 2024, 9:59 IST
<div class="paragraphs"><p>ಎಚ್.ಡಿ.ಕುಮಾರಸ್ವಾಮಿ</p></div>

ಎಚ್.ಡಿ.ಕುಮಾರಸ್ವಾಮಿ

   

ಶಿವಮೊಗ್ಗ: 'ನನ್ನ ಮೇಲಿನ ವೈಯಕ್ತಿಕ ದ್ವೇಷಕ್ಕೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ (ಕೆಐಒಸಿಎಲ್) ಕಾರ್ಯಾಚರಣೆಗೆ ಸಣ್ಣ ಸಣ್ಣ ವಿಚಾರ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ. ಇದರಿಂದ ಆ ಸಂಸ್ಥೆ ನಿತ್ಯ ₹27 ಕೋಟಿ ನಷ್ಟ ಅನುಭವಿಸುತ್ತಿದೆ' ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

'ಕೇಂದ್ರ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲು ನಾನು ಕಡತಕ್ಕೆ ಸಹಿ ಹಾಕಿದ್ದು ಕೆಐಒಸಿಎಲ್‌ನ ಗಣಿಗಾರಿಕೆಗೆ ಸಂಬಂಧಿಸಿದ್ದು, ಅದನ್ನು ರಾಜ್ಯ ಸರ್ಕಾರಕ್ಕೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ನನ್ನ ವಿರುದ್ಧ ಅಪಪ್ರಚಾರ ಆರಂಭಿಸಿದರು' ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

'ಅಷ್ಟಕ್ಕೂ ಕೆಐಒಸಿಎಲ್‌ಗೆ ಸಂಡೂರಿನಲ್ಲಿ ಗಣಿ ಮಂಜೂರು ಮಾಡಿ ಅದನ್ನು ನೋಂದಣಿ ಮಾಡಿಕೊಟ್ಟದ್ದು 2016ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ.

ಗಣಿಗಾರಿಕೆ ಸ್ಥಳದಲ್ಲಿ ಗಿಡ ಬೆಳೆಸಲು ಅರಣ್ಯ ಇಲಾಖೆಗೆ ₹190 ಕೋಟಿ ಹಣ ಕೆಐಒಸಿಎಲ್ ಪಾವತಿಸಿದೆ. ಆದರೆ ರಾಜ್ಯದ ಅರಣ್ಯ ಸಚಿವರಿಗೆ ಅದರ ತಲೆಬುಡ ಗೊತ್ತಿಲ್ಲ. ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ನನ್ನ ಮೇಲೆ ದ್ವೇಷ ಇದ್ದರೆ ಬೇರೆ ಕಡೆ ತೀರಿಸಿಕೊಳ್ಳಿ. ಕೆಐಒಸಿಎಲ್ ಕಾರ್ಯಾಚರಣೆಗೆ ಅಡ್ಡಿಪಡಿಸಿ ಕಾರ್ಮಿಕರನ್ನು ಏಕೆ ಬೀದಿಗೆ ತರುತ್ತೀರಿ' ಎಂದರು.

ಕೇಂದ್ರದೊಂದಿಗೆ ಸಂಘರ್ಷ ಬೇಡ:

'ರಾಜ್ಯದ ಮಾಜಿ ಮುಖ್ಯಮಂತ್ರಿ ಆಗಿ ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಕೇಂದ್ರದೊಂದಿಗೆ ನಿತ್ಯ ಸಂಘರ್ಷ ಬೇಡ' ಎಂದು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪ, ಸಂಘರ್ಷ ಮಾಡೋಣ. ಆದರೆ ಹೀಗೆ ಪ್ರತೀ ದಿನ ರಾಜಕೀಯಕ್ಕಾಗಿ ಸಂಘರ್ಷ ಮಾಡುತ್ತಾ ಹೋದರೆ ರಾಜ್ಯದ ಅಭಿವೃದ್ಧಿ ಕುಂಠಿತ ಆಗಲಿದೆ ಎಂದು ಹೇಳಿದರು.

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರದ ಬಂಡವಾಳ ಹಿಂತೆಗೆತ ಇಲಾಖೆ 2016ರಲ್ಲಿ ತೀರ್ಮಾನ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರದ ಹಣಕಾಸು ಇಲಾಖೆಗೆ ಮನವರಿಕೆ ಮಾಡಿ ಅದರಿಂದ ಯೂಟರ್ನ್ ಆಗಬೇಕಿದೆ ಎಂದರು.

'ವಿಐಎಸ್‌ಎಲ್ ಕಾರ್ಖಾನೆಗೆ ಈಗ ಸಂಪೂರ್ಣ ಹೊಸ ತಾಂತ್ರಿಕತೆಯ ಯಂತ್ರಗಳ ಅಳವಡಿಸಬೇಕಿದೆ. ಅದಕ್ಕೆ ಅಗತ್ಯವಿರುವ ₹15 ಸಾವಿರ ಕೋಟಿ ಬಂಡವಾಳವನ್ನು ಭಾರತೀಯ ಉಕ್ಕು ಪ್ರಾಧಿಕಾರದಿಂದ (SAIL) ಹೂಡಿಕೆ ಮಾಡಿಸಲು ಪ್ರಯತ್ನ ನಡೆಸಿದ್ದೇನೆ. ಸ್ವಲ್ಪ ತಡವಾದರೂ, ಎಷ್ಟೇ ಕಷ್ಟ ಆದರೂ ಕಾರ್ಖಾನೆಗೆ ಜೀವ ಕೊಟ್ಟು ಸರ್. ಎಂ.ವಿಶ್ವೇಶ್ವರಯ್ಯ ಅವರ ಹೆಸರು ಉಳಿಸುವೆ. ಇದರಲ್ಲಿ ಅನುಮಾನವೇ ಬೇಡ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಕೂ ಮೈತ್ರಿ:

'ಬಿಜೆಪಿಯೊಂದಿಗೆ ಮೈತ್ರಿ ಸುದೀರ್ಘ ಅವಧಿಗೆ ಮುಂದುವರೆಯಬೇಕು ಎಂಬುದು ನಮ್ಮ (ಜೆಡಿಎಸ್) ಆಶಯ. ಹೀಗಾಗಿ ಮಹಾನಗರ ಪಾಲಿಕೆ ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮುಂದುವರಿಸಲಿದ್ದೇವೆ. ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ' ಎಂದು ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.