ADVERTISEMENT

ಸೈನ್ಯ ಸೇರಲು ಬಯಸುವವರು ರೈಲು, ಬಸ್‌ ಸುಡುತ್ತಾರೆಯೇ? ಕೇಂದ್ರ ಸಚಿವ ಜೋಶಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 6:50 IST
Last Updated 21 ಜೂನ್ 2022, 6:50 IST
   

ಹೊಸಪೇಟೆ (ವಿಜಯನಗರ): ‘ಸೈನ್ಯ ಸೇರಲುಬಯಸುವವರು ರೈಲು ಗಾಡಿ, ಬಸ್‌ ಸುಡುತ್ತಾರೆಯೇ?’ಹೀಗೆಂದು ಪ್ರಶ್ನಿಸಿದ್ದು ಕೇಂದ್ರ ಗಣಿ ಮತ್ತು ಕಲ್ಲಿದ್ದಲ್ಲು ಖಾತೆ ಸಚಿವ ಪ್ರಹ್ಲಾದ್‌ ಜೋಶಿ.

ಹಂಪಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎಲ್ಲದಕ್ಕೂ ವಿರೋಧ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದರಲ್ಲಿ ಕೆಲವು ಸಮಾಜ ವಿದ್ರೋಹಿ ಶಕ್ತಿಗಳು ಕೂಡಿಕೊಂಡಿವೆ. ಟೂಲ್‌ ಕಿಟ್‌ ಬಂದಿದ್ದನ್ನು ಗಮನಿಸಿರಬಹುದು. ಬಿಹಾರದಲ್ಲಿ ಮೊದಲು ಗಲಭೆ ಆರಂಭಗೊಂಡಿತ್ತು. ಅನಂತರ ಉತ್ತರ ಪ್ರದೇಶಕ್ಕೆ ವ್ಯಾಪಿಸಿತು. ಈ ಗಲಭೆ ಮಾಡಿದವರು ಶೇ 95ರಷ್ಟು ಜನರು ಯಾರು ಸೈನಿಕರಾಗಲು ಅರ್ಜಿ ಸಲ್ಲಿಸಿಲ್ಲ. ಅಂತಹವರರಿಗೆ ಸೈನ್ಯ ಸೇರುವ ಆಸಕ್ತಿಯೂ ಇಲ್ಲ. ಅಂತಹವರು ಬಂದು ರೈಲು ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸೈನ್ಯ ಸೇರಬಯಸುವವರು ರೈಲು, ಬಸ್‌ ಸುಡುತ್ತಾರೆಯೇ? ನಮ್ಮ ಮಕ್ಕಳು ಹೋಗುವಂತಹ ಶಾಲಾ ಮಕ್ಕಳ ಬಸ್ಸಿಗೆ ಕಲ್ಲು ಹೊಡೆಯುತ್ತಾರೆಯೇ? ಇದನ್ನು ಕೆಲವರು ಪ್ರಾಯೋಜಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಅಗ್ನಿಪಥದಂತಹ ಯೋಜನೆ ಜಗತ್ತಿನ ಅನೇಕ ದೇಶಗಳಲ್ಲಿ ಜಾರಿಯಲ್ಲಿವೆ. ನಮ್ಮ ದೇಶದಲ್ಲಿ ಈಗ ಸೈನ್ಯದ ಸರಾಸರಿ ವಯಸ್ಸು 32 ವರ್ಷ ಇದೆ. ನಮ್ಮ ಸೈನ್ಯ ಇನ್ನೂ ಹೆಚ್ಚು ‘ಯಂಗ್‌’ ಆಗಿರಬೇಕೆಂಬ ಕಾರಣಕ್ಕೆ ಯೋಜನೆ ಜಾರಿಗೆ ತರಲಾಗುತ್ತಿದೆ. ಅಗ್ನಿಪಥದಲ್ಲಿ ಸೇರಿದವರಿಗೆ ಒಳ್ಳೆಯ ಪ್ಯಾಕೇಜ್‌ ಇದೆ. 12ನೇ ತರಗತಿ ಪ್ರಮಾಣ ಪತ್ರ ಕೊಡುವ ವ್ಯವಸ್ಥೆ ಕೂಡ ಆಗುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಅನೇಕ ಹೊಸ ಅವಕಾಶಗಳಿವೆ. ಶಿಕ್ಷಣ ಮುಂದುವರೆಸಲು ಅವಕಾಶ ಇದೆ. ಪೊಲೀಸ್‌ ಇಲಾಖೆ, ಸರ್ಕಾರಿ ಆಡಳಿತ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಬಹುದು. ಮೀಸಲಾತಿ ಕೂಡ ಘೋಷಿಸಿದ್ದಾರೆ. ಅಗ್ನಿಪಥ ಯೋಜನೆಯನ್ನು ಶೇ 95ರಷ್ಟು ನಿವೃತ್ತ ಹಾಗೂ ಹಾಲಿ ಮಿಲಿಟರಿ ಅಧಿಕಾರಿಗಳನ್ನು ಬೆಂಬಲಿಸಿದ್ದಾರೆ’ ಎಂದು ಹೇಳಿದರು ಎಂದರು.

‘ಯುವಕರಿಗೆ ಮನವರಿಕೆ ಮಾಡುವ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಕೆಲವು ರಾಜಕಾರಣಿಗಳು, ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವು ಸಮಾಜ ವಿದ್ರೋಹಿ ಶಕ್ತಿಗಳು ಏನಾದರೂ ಕೂಡ ವಿರೋಧ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿವೆ. ನಮ್ಮ ಕೆಲವು ಪಕ್ಷಗಳು ಅದರಲ್ಲೂ ಕಾಂಗ್ರೆಸ್‌ ಹಾಗೂ ಅದರಂತೆ ಧೋರಣೆ ಹೊಂದಿರುವ ಪಕ್ಷಗಳು ವಿರೋಧ ಮಾಡುವುದೇ ಒಂದು ಕಾಯಕವಾಗಿದೆ’ ಎಂದು ಟೀಕಿಸಿದರು.

‘ಬಿಜೆಪಿ ಮುಖಂಡ ವಿಜಯ ವರ್ಗೀಯ ಅವರು ಸೆಕ್ಯುರಿಟಿ ಗಾರ್ಡ್‌ ಅಥವಾ ಇನ್ಯಾವುದೇ ಕಡೆ ಕೆಲಸಕ್ಕೆ ಸೇರಬಹುದು ಎಂದು ಹೇಳಿಲ್ಲ. ಅಗ್ನಿಪಥ ಸೇರಿ ಹೊರಬಂದ ನಂತರ ಎಲ್ಲ ರೀತಿಯ ಅರ್ಹತೆ ಇರುತ್ತದೆ ಎಂದು ಹೇಳಿದ್ದಾರೆ. ಅನೇಕರು ದೊಡ್ಡ ಅಧಿಕಾರಿಗಳು ಕೂಡ ಆಗಹಬಹುದು. ಹಣಕಾಸಿನ ನೆರವು, ಸಾಲ ಸೌಲಭ್ಯ ಕೂಡ ಒದಗಿಸಲಾಗುತ್ತದೆ. ಜಗತ್ತಿನ ಬಹಳಷ್ಟು ದೇಶಗಳಲ್ಲಿ ಈ ವ್ಯವಸ್ಥೆ ಇದೆ. ನಮ್ಮ ದೇಶದಲ್ಲಿ 1989ರಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಏನಾದರೂ ಮಾಡಿ ಕೊರೊನಾದಲ್ಲಿ ಮೋದಿಯವರ ಮುಖಕ್ಕೆ ಮಸಿ ಬಳಿಯಬಹುದು ಎಂದು ಕೆಲವರು ಅಂದುಕೊಂಡಿದ್ದರು. ಆದರೆ, ಮೋದಿಯವರು ಅದನ್ನು ಸಮರ್ಥವಾಗಿ ಎದುರಿಸಿದರು. ಅನಂತರ ಅನೇಕ ಚುನಾವಣೆಗಳಲ್ಲಿ ಗೆದ್ದೆವು. ಇದೇ ರೀತಿ ವಿರೋಧ ಮಾಡುತ್ತ ಹೋದರೆ ಜನ ಎಲ್ಲಿಡಬೇಕೋ ಅವರನ್ನು ಅಲ್ಲಿಡುತ್ತಾರೆ’ ಎಂದು ಹೇಳಿದರು.

ಹಂಪಿ ಅಭಿವೃದ್ಧಿಗೆ ಬದ್ಧ
‘ನಿಗದಿತ ಯೋಜನೆಗಳನ್ನು ತೆಗೆದುಕೊಂಡು ನವದೆಹಲಿಗೆ ಬಂದರೆ ಹಂಪಿಯಲ್ಲಿ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಎಲ್ಲ ರೀತಿಯ ಪ್ರೋತ್ಸಾಹ ಭಾರತ ಸರ್ಕಾರ ನೀಡಲಿದೆ. ಯಾವುದಕ್ಕೆಲ್ಲ ವಿನಾಯಿತಿ ಕೊಡಲು ಸಾಧ್ಯವಿದೆಯೋ ಎಂಬುದನ್ನು ಪರಿಶೀಲಿಸಿ ಅನುಮತಿ ಕೊಡಲಾಗುವುದು. ಸರ್ಕಾರ ಹಂಪಿ, ಹೊಸ ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲಿದೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿ ನಿರೂಪಣೆ’
‘ಡಬಲ್‌ ಎಂಜಿನ್‌ ಸರ್ಕಾರದ ಮೂಲಕ ಅಭಿವೃದ್ಧಿ ಹೇಗೆ ಮಾಡಬಹುದು ಎಂಬುದನ್ನು ಎರಡೂ ಸರ್ಕಾರಗಳು ನಿರೂಪಿಸಿವೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

‘ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ₹33,000 ಕೋಟಿ, ಮೈಸೂರಿನಲ್ಲಿ ₹8,000 ಕೋಟಿ ಮೊತ್ತದ ಅನೇಕ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಷ್ಟೇ ಅಲ್ಲ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏರ್ಪಡಿಸಿದ್ದ ಯೋಗ ದಿನದಲ್ಲಿ ಭಾಗವಹಿಸಿದ್ದು ಸ್ವಾಗತಾರ್ಹ’ ಎಂದು ಹೇಳಿದರು.

‘ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಕಡೆಗಳಲ್ಲಿ ಯೋಗ ದಿನ ಆಚರಿಸಬೇಕೆಂದು ಪ್ರಧಾನಿ ತಿಳಿಸಿದ್ದರು. ಅದರಂತೆ ಎಲ್ಲ ಕಡೆ ಮಂತ್ರಿಗಳನ್ನು ಕಳುಹಿಸಿದ್ದರು. ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ, ಯೋಗಾಯೋಗ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.