ADVERTISEMENT

ಟಿಕೆಟ್‌ ಕೊಡಿಸುವುದಾಗಿ ಆಮಿಷ ಪ್ರಕರಣ: ಪ್ರಲ್ಹಾದ ಜೋಶಿ ವಿವರಣೆ ಕೇಳಿದ ವರಿಷ್ಠರು

ಸೋದರನ ವಿರುದ್ಧ ₹2 ಕೋಟಿ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 23:30 IST
Last Updated 18 ಅಕ್ಟೋಬರ್ 2024, 23:30 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ನವದೆಹಲಿ: ಲೋಕಸಭೆ ಚುನಾವಣೆಗೆ ಟಿಕೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ₹2 ಕೋಟಿ ಸುಲಿಗೆ ಮಾಡಿರುವ ಪ್ರಕರಣದಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಸಹೋದರನ ಹೆಸರು ಕೇಳಿ ಬಂದಿರುವ ಕಾರಣ ಬಿಜೆಪಿ ಮುಜುಗರಕ್ಕೆ ಸಿಲುಕಿದೆ. ಈ ಪ್ರಕರಣದ ಬಗ್ಗೆ ಜೋಶಿ ಅವರಿಂದ ಪಕ್ಷದ ವರಿಷ್ಠರು ವಿವರಣೆ ಕೇಳಿದ್ದಾರೆ. 

‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣಗಳ ವಿರುದ್ಧ ಬಿಜೆಪಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದೆ. ಈ ಹಗರಣದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬುದು ವರಿಷ್ಠರ ಸೂಚನೆ. ಈಚಿನ ದಿನಗಳಲ್ಲಿ ಬಿಜೆಪಿ ನಾಯಕರೇ ಹಗರಣಗಳಲ್ಲಿ ಸಿಲುಕಿ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ಪ್ರಕರಣವು ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಈ ಪ್ರಕರಣ ಬಯಲಿಗೆ ಬಂದಿದೆ. ಇದು ಸಹ ಕೇಂದ್ರದ ಪ್ರಭಾವಿ ಸಚಿವರ ಕುಟುಂಬದ ವಿರುದ್ಧ. ಇದರಿಂದ ಪಕ್ಷ ಪದೇ ಪದೇ ಮುಜುಗರಕ್ಕೆ ಸಿಲುಕುವಂತಾಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಿದೆ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು. 

‘ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣ ಚುನಾವಣಾ ರ‍್ಯಾಲಿಯಲ್ಲಿ ಹಲವು ಸಲ ಪ್ರಸ್ತಾಪಿಸಿದ್ದರು. ಇದರಿಂದ ಪಕ್ಷಕ್ಕೆ ಅನುಕೂಲವಾಗಿತ್ತು. ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್‌ ಸರ್ಕಾರದ ಹುಳುಕುಗಳನ್ನು ಈ ಚುನಾವಣೆಯಲ್ಲಿ ಎತ್ತಿ ತೋರಿಸಲು ಪಕ್ಷ ಸಿದ್ಧತೆ ನಡೆಸಿತ್ತು. ಆದರೆ, ಜೋಶಿ ಪ್ರಕರಣದಿಂದ ಸ್ವಲ್ಪ ಹಿನ್ನಡೆಯಾಗಿರುವುದು ನಿಜ. ಜತೆಗೆ, ಪ್ರತಿಪಕ್ಷಗಳಿಗೆ ಚುನಾವಣಾ ಅಸ್ತ್ರ ನೀಡಿದಂತೆ ಆಗಿದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.