ಬೆಂಗಳೂರು: ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ಕಾನೂನು ಕ್ರಮ ಎದುರಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ರಾಜ್ಯಪಾಲರು ತಜ್ಞರ ಜೊತೆ ಚರ್ಚಿಸಿ, ಭ್ರಷ್ಟಾಚಾರ ತಡೆ ಕಾನೂನಿನಂತೆ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ರಕ್ಷಿಸಲು, ಭ್ರಷ್ಟಾಚಾರ ಮುಚ್ಚಿಹಾಕಲು ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ, ಯಾರೇ ಆದರೂ ಕಾನೂನು ಎದುರಿಸಬೇಕು. ಹಾಗಾಗಿ, ವಾಲ್ಮೀಕಿ ನಿಗಮದ ಹಗರಣ, ‘ಮುಡಾ’ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ಲೋಕಾಯುಕ್ತದಲ್ಲಿದ್ದವು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಲೋಕಾಯುಕ್ತವನ್ನೇ ದುರ್ಬಲ ಮಾಡಿದ್ದರು. ಎಸಿಬಿಗೆ ವರ್ಗಾವಣೆ ಮಾಡಿ ಮುಚ್ಚಿ ಹಾಕಿದ್ದರು ಎಂದು ರೋಪಿಸಿದರು.
ಕೆಂಪಯ್ಯ ಸಮಿತಿ ವರದಿ ಎಲ್ಲಿ ಹೋಯಿತೆಂದೇ ಗೊತ್ತಾಗಿಲ್ಲ. ಐದು ವರ್ಷ ಅಧಿಕಾರ ಪೂರ್ಣಗೊಳಿಸಿದ್ದರು. ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕಿತ್ತು. ಈಗ ಒಂದು ವರ್ಷದಲ್ಲೇ ಸಿದ್ದರಾಮಯ್ಯನವರ ಮೇಲೆ ಎರಡು ಗುರುತರ ಆರೋಪಗಳಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ₹187 ಕೋಟಿಯ ಭ್ರಷ್ಟಾಚಾರದ ಆರೋಪವಿದೆ. ಈ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿಕೊಳ್ಳಲಾಗಿತ್ತು. ಕರ್ನಾಟಕದ ಪರಿಶಿಷ್ಟರು, ಬಡವರಿಗೆ ಮೀಸಲಿಟ್ಟ ಹಣವನ್ನು ಹೈಕಮಾಂಡ್ ನಿರ್ದೇಶನದಂತೆ ಸಿಎಂ ಅವರು ತೆಲಂಗಾಣದ ವೈನ್‌ಶಾಪ್, ಜ್ಯುವೆಲ್ಲರಿ ಅಂಗಡಿಗಳಿಗೆ ಕೊಟ್ಟಿದ್ದರು ಎಂದು ಟೀಕಿಸಿದರು.
‘ಮುಡಾ’ ಪ್ರಕರಣದಲ್ಲಿ ದಲಿತರ ಜಮೀನನ್ನು ತೆಗೆದುಕೊಂಡಿದ್ದಾರೆ. ಕಾನೂನುಬಾಹಿರವಾಗಿ ಮುಖ್ಯಮಂತ್ರಿ ಪತ್ನಿ ಪಡೆದಿದ್ದಾರೆ. ಎಲ್ಲ ಕಾಲದಲ್ಲೂ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದ ಸಿದ್ದರಾಮಯ್ಯ ಪ್ರಕರಣ ಮುಚ್ಚಿಹಾಕಲು ದೇಸಾಯಿ ಸಮಿತಿ ರಚಿಸಿದ್ದಾರೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.