ನವದೆಹಲಿ: ನದಿ ಜಲಾನಯನ ಪ್ರದೇಶದ ಧಾರಣಾ ಶಕ್ತಿ ಹಾಗೂ ಪರಿಸರ ಪರಿಣಾಮದ ಮೌಲ್ಯಮಾಪನದ ಕುರಿತು ಅಧ್ಯಯನಗಳನ್ನು ನಡೆಸುವ ಮುನ್ನವೇ ಪ್ರಸ್ತಾವಿತ ಜಲ ವಿದ್ಯುತ್ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಲು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತೀರ್ಮಾನಿಸಿದೆ. ಇದೊಂದು ಅನಾಹುತಕಾರಿ ನಡೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ರಾಜ್ಯಗಳ ಅರಣ್ಯ ಇಲಾಖೆಗಳ ಮುಖ್ಯಸ್ಥರಿಗೆ ಡಿಸೆಂಬರ್ 27ರಂದು ಪತ್ರ ಬರೆದಿರುವ ಸಚಿವಾಲಯವು, ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಪರಿಸರ, ಜೀವವೈವಿಧ್ಯ, ಪುನರ್ವಸತಿ ಹಾಗೂ ಅದಕ್ಕೆ ಸಂಬಂಧಿಸಿದ ಇತರ ವಿಷಯಗಳನ್ನು ಪರಿಸರ ಮೌಲ್ಯಮಾಪನದ ಅಧ್ಯಯನವು ಗಣನೆಗೆ ತೆಗೆದುಕೊಳ್ಳುತ್ತದೆ. ಅಧ್ಯಯನ ವರದಿಗಳ ಆಧಾರದಲ್ಲೇ ಯೋಜನೆಗಳಿಗೆ ಅನುಮೋದನೆ ನೀಡಲಾಗುತ್ತದೆ ಎಂದು ಸಚಿವಾಲಯವು 2013ರಲ್ಲಿ ಹೇಳಿತ್ತು.
ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಅಡಿಯಲ್ಲಿ ಯೋಜನೆಗೆ ಅನುಮೋದನೆ ನೀಡಲು ದೀರ್ಘಕಾಲ ಬೇಕಾಗುತ್ತದೆ. ಹೀಗಾಗಿ, ಷರತ್ತುಗಳನ್ನು ವಿಧಿಸಿ ಸಚಿವಾಲಯದ ಅರಣ್ಯ ಸಂರಕ್ಷಣಾ ವಿಭಾಗವು ಯೋಜನೆಗೆ ಮೊದಲನೇ (ತಾತ್ವಿಕ) ಹಂತದ ಅನುಮೋದನೆ ನೀಡಬಹುದು. ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಜಲ ವಿದ್ಯುತ್ ಯೋಜನೆಗಳಿಗೆ ಅನ್ವಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ. ಜತೆಗೆ, ಧಾರಣಾ ಶಕ್ತಿ ಹಾಗೂ ಪರಿಸರ ಮೌಲ್ಯಮಾಪನದ ಅಧ್ಯಯನ ವರದಿಗಳು ಬಂದ ಬಳಿಕವೇ ಯೋಜನೆಗೆ ಅಂತಿಮ ಅನುಮೋದನೆ ನೀಡಲು ಸಚಿವಾಲಯ ನಿರ್ಧರಿಸಿದೆ. ಆದರೆ, ನದಿ ಜಲಾನಯನ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಜಲ ವಿದ್ಯುತ್ ಯೋಜನೆಗಳನ್ನು ಮಂಜೂರು ಮಾಡಲು ಧಾರಣಾ ಸಾಮರ್ಥ್ಯ ಹಾಗೂ ಪರಿಸರ ಪರಿಣಾಮದ ಮೌಲ್ಯಮಾಪನ ಅಧ್ಯಯನಗಳನ್ನು ನಡೆಸುವುದು ಅವಶ್ಯಕ ಎಂದೂ ಸ್ಪಷ್ಟಪಡಿಸಿದೆ. ಸಚಿವಾಲಯದ ಸಂಬಂಧಪಟ್ಟ ವಿಭಾಗವು ನದಿ ಜಲಾನಯನ ಪ್ರದೇಶದ ವರದಿಗಳ ವಿವರಗಳನ್ನು ರಾಜ್ಯ ಸರ್ಕಾರಗಳ ಜತೆಗೆ ಹಂಚಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ.
‘ಯೋಜನೆ ಆರಂಭಿಸುವವರು ಯೋಜನಾ ಮಂಜೂರಾತಿಗಾಗಿ ಸಚಿವಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಸಚಿವಾಲಯವು ಕೆಲವೊಂದು ಷರತ್ತುಗಳನ್ನು ವಿಧಿಸಿ ತಾತ್ವಿಕ ಅನುಮೋದನೆ ನೀಡುತ್ತದೆ. ಬಳಿಕ ಅವರು ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸುತ್ತಾರೆ. ಬ್ಯಾಂಕ್ ಹತ್ತಾರು ಕೋಟಿ ಸಾಲ ಕೊಡುತ್ತದೆ. ಬ್ಯಾಂಕ್ ಸಾಲವನ್ನೇ ನೆಪವಾಗಿಟ್ಟುಕೊಂಡು ಅಂತಿಮ ಅನುಮೋದನೆ ಕೊಡಿ ಎಂದು ಸಚಿವಾಲಯಕ್ಕೆ ದುಂಬಾಲು ಬೀಳುತ್ತಾರೆ. ಅನ್ಯ ಮಾರ್ಗವಿಲ್ಲದೆ ಸಚಿವಾಲಯವು ಯೋಜನೆಗೆ ಅಂತಿಮ ಅನುಮೋದನೆ ನೀಡಬೇಕಾಗುತ್ತದೆ. ಹೆದ್ದಾರಿ ಯೋಜನೆಗಳಲ್ಲಿ ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೀಗ, ಜಲ ವಿದ್ಯುತ್ ಯೋಜನೆಗಳಿಗೂ ಈ ತಂತ್ರ ಅನುಸರಿಸಲು ಮುಂದಾಗಿದ್ದಾರೆ. ಇದೊಂದು ಅಪವಿತ್ರ ಮೈತ್ರಿ’ ಎಂದು ಪರಿಸರವಾದಿಗಳು ದೂರುತ್ತಾರೆ.
‘ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ’
ಸುತ್ತೋಲೆಗಳ ಮೂಲಕ ನಿರ್ಬಂಧಗಳನ್ನು ಸಡಿಲಗೊಳಿಸಿ ಪರಿಸರ ಅನುಮೋದನೆ ನೀಡುವ ತಂತ್ರಗಾರಿಕೆ ಅಳವಡಿಸಲು ಪರಿಸರ ಸಚಿವಾಲಯ ಹಲವು ಸಮಯದಿಂದ ಪ್ರಯತ್ನಿಸುತ್ತಿದೆ. ಜಲ ವಿದ್ಯುತ್ ಯೋಜನೆಗಳಿಗೆ ತಾತ್ವಿಕ ಅನುಮೋದನೆ ಪಡೆಯುವುದನ್ನು ಅನುವು ಮಾಡಿಕೊಡುವ ಈಗಿನ ಆದೇಶ ಇದರ ಮುಂದುವರಿದ ಭಾಗ. ಇದು ಅರಣ್ಯ (ಸಂರಕ್ಷಣೆ) ಕಾಯ್ದೆ 1980ರ ನಿಯಮಗಳ ಮತ್ತು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ.
- ಪ್ರವೀಣ್ ಭಾರ್ಗವ್, ವೈಲ್ಡ್‌ಲೈಫ್ ಫಸ್ಟ್‌ನ ಟ್ರಸ್ಟಿ
‘ವಿನಾಶಕಾರಿ ತೀರ್ಮಾನ’
ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಕಾನೂನು ಹಾಗೂ ನಿಯಮಗಳನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ತೀರ್ಮಾನ ಅತ್ಯಂತ ದುರದೃಷ್ಟಕರ. ಪರಿಸರ ಮೌಲ್ಯಮಾಪನ ಇಲ್ಲದೆ ಜಲ ವಿದ್ಯುತ್ ಯೋಜನೆಗಳಿಗೆ ಮೊದಲನೇ ಹಂತದ ಅನುಮತಿ ನೀಡುವುದು ಅರಣ್ಯ ಸಂರಕ್ಷಣಾ ಕಾಯ್ದೆಯ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿದೆ. ಈ ನಿರ್ಧಾರ ಅತ್ಯಂತ ವಿನಾಶಕಾರಿ. ಸರ್ಕಾರ ಕೂಡಲೇ ಇದನ್ನು ಹಿಂಪಡೆಯಬೇಕು
- ಗಿರಿಧರ್ ಕುಲಕರ್ಣಿ, ಪರಿಸರ ಸಂರಕ್ಷಣಾವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.