ಬೆಂಗಳೂರು: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕರ್ನಾಟಕದಿಂದ ಕೇಂದ್ರ ಸಚಿವ ಸಂಪುಟ ಸೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಶೋಭಾ ಕರಂದ್ಲಾಜೆ ಪಾತ್ರರಾಗಿದ್ದಾರೆ.
ಕಳೆದ ಮೂರು ದಶಕಗಳಿಂದೀಚೆಗೆ ರಾಜ್ಯದಮಹಿಳೆಯೊಬ್ಬರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಕೇಂದ್ರ ಸಚಿವ ಸ್ಥಾನಕ್ಕೆ ಏರಿಲ್ಲ. ಆ ಕೀರ್ತಿಗೂ ಶೋಭಾ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ತಡವಾಗಿಯಾದರೂ ಶೋಭಾ ಅವರನ್ನು ಗುರುತಿಸಿದ್ದಾರೆ ಎಂಬ ವಿಶ್ಲೇಷಣೆ ಬಿಜೆಪಿ ವಲಯದಲ್ಲಿ ನಡೆದಿದೆ.
ಈ ಹಿಂದೆ 1991 ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್‌ನ ಡಿ.ಕೆ.ತಾರಾದೇವಿ ಅವರು ಪಿ.ವಿ.ನರಸಿಂಹರಾವ್ ಅವರ ಮಂತ್ರಿ ಮಂಡಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈಗ ಚಿಕ್ಕಮಗಳೂರು–ಉಡುಪಿ ಕ್ಷೇತ್ರವನ್ನು ಶೋಭಾ ಪ್ರತಿನಿಧಿಸುತ್ತಿದ್ದಾರೆ.
ಮಾರ್ಗರೇಟ್ ಆಳ್ವಾ ಅವರು ಅದೇ ಅವಧಿಯಲ್ಲಿ (1991 ರಿಂದ 96) ಕೇಂದ್ರ ಸಚಿವರಾಗಿದ್ದರು. ಆಗ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಆಳ್ವಾ 1999 ರಲ್ಲಿ ಕೆನರಾ ಕ್ಷೇತ್ರದಿಂದ ಲೋಕಸಭೆಗೆ ಒಮ್ಮೆ ಮಾತ್ರ ಆಯ್ಕೆ ಆಗಿದ್ದರು.
ಆಗ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇತ್ತು. ಯುಪಿಎ ಅವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು.
1991 ರ ಬಳಿಕ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಿಂದ ಗೆದ್ದಿರುವ ಮಹಿಳೆಯರು ಸಚಿವ ಸ್ಥಾನ ಪಡೆಯಲಿಲ್ಲ. ಗೆದ್ದ ಮಹಿಳೆಯರ ಸಂಖ್ಯೆಯೂ ಕಡಿಮೆ. ಶೋಭಾ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವುದು ಮಾತ್ರವಲ್ಲದೆ, ಹಿಂದೆ ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ಅವರಿಗೆ ಸ್ಥಾನ ನೀಡಲಾಗಿದೆ.
2019 ರ ಲೋಕಸಭಾ ಚುನಾವಣೆ ಬಳಿಕ ಬಹುತೇಕ ನೇಪಥ್ಯ ಸರಿದಿದ್ದ ಅವರು, ಬಹಿರಂಗ ಹೇಳಿಕೆಗಳನ್ನು ಕೊಡುವುದನ್ನೂ ಕಡಿಮೆ ಮಾಡಿದ್ದರು. 2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯದಿಂದ ಸ್ಪರ್ಧಿಸುವ ಬಗ್ಗೆ ಒಲವು ಹೊಂದಿದ್ದರು. ಕೇಂದ್ರ ನಾಯಕತ್ವ ಅದಕ್ಕೆ ಅವಕಾಶ ನೀಡಿರಲಿಲ್ಲ.
2019 ರ ಲೋಕಸಭೆಯಲ್ಲಿ ಗೆದ್ದ ಬಳಿಕ ಅವರು ಪಕ್ಷದ ಚಟುವಟಿಕೆಯಿಂದಲೂ ದೂರ ಉಳಿದಿದ್ದರು.
ಯಡಿಯೂರಪ್ಪ ಅವರ ಜತೆಗೆ ನಿಕಟ ಒಡನಾಟ ಹೊಂದಿದ್ದ ಶೋಭಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಅಂತರ ಕಾಯ್ದುಕೊಂಡಿದ್ದರು. ಅದಕ್ಕೆ, ಯಡಿಯೂರಪ್ಪನವರ ಕುಟುಂಬದವರು ಕಾರಣ ಎಂದೂ ಹೇಳಲಾಗಿತ್ತು.
ಅಲ್ಲದೇ, ಕರ್ನಾಟಕದ ಸರ್ಕಾರ ಹಾಗೂ ರಾಜಕಾರಣದಲ್ಲಿ ತಲೆ ಹಾಕದಂತೆ ಪಕ್ಷದ ವರಿಷ್ಠರು ಶೋಭಾ ಅವರಿಗೆ ಸ್ಪಷ್ಟ ಸೂಚನೆಯನ್ನು ನೀಡಿದ್ದರು ಎನ್ನಲಾಗುತ್ತಿದೆ.
ಇದೀಗ, ಕೇಂದ್ರ ನಾಯಕತ್ವ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಅವರಿಗೆ ಶೋಭಾ ಅವಕಾಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.