ಬೆಂಗಳೂರು: ಇನ್ನು ಮುಂದೆ ವಿಶ್ವವಿದ್ಯಾಲಯಗಳು ಯಾವುದೇ ಹುದ್ದೆಗಳಿಗೂ ನೇರ ನೇಮಕಾತಿ ಮಾಡಿಕೊಳ್ಳಬಾರದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೂಚನೆ ನೀಡಿದ್ದಾರೆ.
ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ ಮಾತನಾಡಿ, ‘ನೇರ ನೇಮಕಾತಿಯು ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಆದ್ದರಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕವೇ ನೇಮಕಾತಿ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.
‘ವಿಶ್ವವಿದ್ಯಾಲಯಗಳಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ. ಈ ಪದ್ಧತಿ ನಿಲ್ಲಿಸಿ, ಪಾರದರ್ಶಕವಾಗಿ ನೇಮಕ ಮಾಡಲು, ಪರೀಕ್ಷಾ ಪ್ರಾಧಿಕಾರದ ಮೂಲಕವೇ ಪರೀಕ್ಷೆ ನಡೆಸುವುದು ಸೂಕ್ತ’ ಎಂದು ಅವರು ಸಭೆಯಲ್ಲಿ ತಿಳಿಸಿದರು ಎಂದು ಮೂಲಗಳು ಹೇಳಿವೆ.
ನೇಮಕ: ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಖಾಲಿ ಇರುವ 300 ಪ್ರಾಂಶುಪಾಲರು ಮತ್ತು 3000 ಉಪನ್ಯಾಸಕರ ಹುದ್ದೆಗಳಿಗೆ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯುಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸಿದೆ. ವಿಶ್ವವಿದ್ಯಾಲಯ,ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಹಳ್ಳಿ ದತ್ತು ಪಡೆಯಲು ನಿರ್ದೇಶನ
ರಾಜ್ಯದ ಪ್ರತಿಯೊಂದು ವಿಶ್ವವಿದ್ಯಾಲಯ ಹಳ್ಳಿಯೊಂದನ್ನು ದತ್ತು ಪಡೆದು, ಉನ್ನತ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನಿರ್ದೇಶನ ನೀಡಿದರು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ನಿರ್ದೇಶನಾಲಯದ ಆದೇಶದ ಪ್ರಕಾರ ಪ್ರತಿ ವಿಶ್ವವಿದ್ಯಾಲಯ ತಲಾ ಐದು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಬೇಕು. ಅಷ್ಟು ಸಾಧ್ಯ ಆಗದೇ ಇದ್ದರೆ, ಕನಿಷ್ಠ ಒಂದು ಹಳ್ಳಿಯನ್ನಾದರೂ ದತ್ತ ಪಡೆಯಬೇಕು. ಈ ಬಗ್ಗೆ ಆರು ತಿಂಗಳಲ್ಲಿ ವರದಿ ನೀಡಬೇಕು ಎಂದು ಅವರು ಕುಲಪತಿಗಳಿಗೆ ಸೂಚಿಸಿದರು.
ಕೆಲವು ವಿಶ್ವವಿದ್ಯಾಲಯಗಳು ಕೇಂದ್ರದ ಆದೇಶವನ್ನು ಪಾಲನೆ ಮಾಡದೇ ಇರುವ ಕಾರಣ. ಆರು ತಿಂಗಳ ಗಡುವು ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.