ಬೆಂಗಳೂರು: ‘ದೇವಸ್ಥಾನ, ಮಸೀದಿ ಸೇರಿದಂತೆ ರಾಜ್ಯದ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಪಬ್- ರೆಸ್ಟೋರೆಂಟ್‌ಗಳಲ್ಲಿನ ಧ್ವನಿವರ್ಧಕ ದುರ್ಬಳಕೆ ತಡೆಗಟ್ಟಲು ವಿಶೇಷ ಅಭಿಯಾನ ನಡೆಸಿ ಮತ್ತು ಅನಧಿಕೃತವಾಗಿ ಧ್ವನಿವರ್ಧಕ ಉಪಯೋಗಿಸುತ್ತಿದ್ದರೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ತೆರವುಗೊಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ, ಹೈಕೋರ್ಟ್ ನಿರ್ದೇಶಿಸಿದೆ.
‘ನಗರದ ಕೆಲವು ಮಸೀದಿಗಳು ಬಳಸುತ್ತಿರುವ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ’ ಎಂದು ಆಕ್ಷೇಪಿಸಿ ಥಣಿಸಂದ್ರದ ಪಿ.ರಾಕೇಶ್ ಸೇರಿ 32 ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
‘ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್, ಪಬ್- ರೆಸ್ಟೋರೆಂಟ್‌ಗಳಲ್ಲಿ ಧ್ವನಿವರ್ಧಕ ಹಾಗೂ ಶಬ್ದ ಹೊರಸೂಸುವ ಉಪಕರಣಗಳ ದುರ್ಬಳಕೆ ತಡೆಯಲು ಅಭಿಯಾನ ಕೈಗೊಳ್ಳಬೇಕು. ಪರವಾನಗಿ ಇಲ್ಲದೆ ಧ್ವನಿವರ್ಧಕ ಉಪಯೋಗಿಸುತ್ತಿರುವ ಅಥವಾ ನಿಗದಿತ ಡೆಸಿಬಲ್ ಅನ್ನು ಮೀರಿ ಹೆಚ್ಚಿನ ಶಬ್ದ ಹೊರಸೂಸುತ್ತಿರುವ ಧ್ವನಿವರ್ಧಕಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮೂರು ವಾರದಲ್ಲಿ ವರದಿ ಸಲ್ಲಿಸಬೇಕು’ ಎಂದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.