ಬೆಂಗಳೂರು: ದಲಿತ ಕುಟುಂಬದ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿ, ಜಾತಿ ಹೆಸರಿನಲ್ಲಿ ನಿಂದಿಸಿ ಹಲ್ಲೆ ನಡೆಸಿದ ಎಂಟು ಮಂದಿ ಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
‘ನಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು‘ ಎಂದು ಕೋರಿ ಪಾಂಡುರಂಗ ಭಟ್ ಸೇರಿದಂತೆ ಏಳು ಮಂದಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪಪೀಠ ಈ ಕುರಿತಂತೆ ಆದೇಶಿಸಿದೆ.
‘ಅಸ್ಪೃಶ್ಯತೆ ಆಚರಣೆ ಸಂವಿಧಾನಬಾಹಿರ ಎಂದು ಗೊತ್ತಿದ್ದರೂ, ಗ್ರಾಮೀಣ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೇವಾಲಯ ಪ್ರವೇಶ ಮತ್ತು ಪೂಜೆಗೆ ನಿರಾಕರಿಸಿ ಅಡ್ಡಿಪಡಿಸುವ ಪ್ರಕ್ರಿಯೆಗಳು ಮುಂದುವರೆದಿರುವುದು ದುರದೃಷ್ಟಕರ‘ ಎಂದು ನ್ಯಾಯಪೀಠ ಹೇಳಿದೆ.
‘ಪ್ರಕರಣದಲ್ಲಿ ದೂರುದಾರರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣದಿಂದ ಅರ್ಜಿದಾರರು ಅವರ ದೇವಾಲಯ ಪ್ರವೇಶಕ್ಕೆ ನಿರಾಕರಿಸಿರುವುದು ಪ್ರತಿಗಾಮಿ ನಡೆಯಾಗಿದೆ. ಇಂತಹ ಬೆಳವಣಿಗೆ ನ್ಯಾಯಾಲಯದ ಆತ್ಮಸಾಕ್ಷಿಯನ್ನು ಕದಡುವಂತಿದೆ. ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ಇಂತಹ ತರತಮ ತಕ್ಷಣವೇ ನಿಲ್ಲುವಂತಾಗಬೇಕು‘ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
‘ದೇವಾಲಯದ ಹೊರಭಾಗವೂ ಸಾರ್ವಜನಿಕ ಸ್ಥಳ. ದೂರುದಾರರು ಮತ್ತವರ ಕುಟುಂಬಸ್ಥರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಗೊತ್ತಾಗಿರುವುದರಿಂದಲೇ ಅವರನ್ನು ಅವಮಾನಿಸುವುದಕ್ಕಾಗಿ ದೇವಾಲಯ ಪ್ರವೇಶಕ್ಕೆ ತಡೆಹಿಡಿಯಲಾಗಿದೆ‘ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿದೆ. ‘ಈ ಪ್ರಕರಣ 2016ರಲ್ಲೇ ನಡೆದಿದೆ. ಆದ್ದರಿಂದ, ವಿಚಾರಣಾ ನ್ಯಾಯಾಲಯವು ಮುಂದಿನ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು‘ ಎಂದೂ ನಿರ್ದೇಶಿಸಿದೆ.
ಪ್ರಕರಣವೇನು?: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ವಿನಾಯಕ ನಗರ ಕ್ಯಾಂಪ್‌ನ ಸಾವಿತ್ರಮ್ಮ ಅವರ ಕುಟುಂಬ 2016ರ ಸೆಪ್ಟೆಂಬರ್ 17ರಂದು ಗಡಿ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿತ್ತು. ಈ ಸಂದರ್ಭದಲ್ಲಿ ಅರ್ಜಿದಾರರು, ದೂರುದಾರರ ಜಾತಿ ಹೆಸರನ್ನು ಉಲ್ಲೇಖಿಸಿ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ನಡೆಸಿದ್ದರು. ಈ ಸಂಬಂಧ ಸಾವಿತ್ರಮ್ಮ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ನಮ್ಮ ವಿರುದ್ಧ ದಾಖಲಿಸಲಾಗಿರುವ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ದೂರುದಾರರು ಹಾಗೂ ಅರ್ಜಿದಾರರ ನಡುವೆ ಗಲಾಟೆ ನಡೆದಿರುವುದು ದೇವಾಲಯದ ಗೋಡೆಯ ಬಳಿ. ಹೀಗಾಗಿ ಅದು ಸಾರ್ವಜನಿಕ ಸ್ಥಳ ಎನಿಸಿಕೊಳ್ಳುವುದಿಲ್ಲ. ಆದ್ದರಿಂದ, ನಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು‘ ಎಂದು ಅರ್ಜಿದಾರರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.