ಬೆಂಗಳೂರು: ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರದ ಘಟಕಗಳ ಸ್ಥಾಪನೆ ಮತ್ತು ವಿಸ್ತರಣೆಗಾಗಿ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಯುಪಿಸಿಎಲ್) ನೀಡಿದ್ದ ಪರಿಸರ ಅನುಮತಿಯನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅದಾನಿ ಪವರ್ ಲಿಮಿಟೆಡ್‌ಗೆ ವರ್ಗಾಯಿಸಿದೆ.
2017ರಲ್ಲಿ ನೀಡಿದ್ದ ಪರಿಸರ ಅನುಮತಿಯ ವಿಚಾರಕ್ಕೆ ಸಂಬಂಧಿಸಿದ ಮೊಕದ್ದಮೆಯು ಸುಪ್ರೀಂ ಕೋರ್ಟ್‌ನಲ್ಲಿದೆ. ಸುಪ್ರೀಂ ಕೋರ್ಟ್‌ನಲ್ಲಿನ ಮೊಕದ್ದಮೆಯು ಇತ್ಯರ್ಥವಾಗುವುದಕ್ಕೂ ಮುನ್ನವೇ ಸಚಿವಾಲಯವು ಪರಿಸರ ಅನುಮತಿಯನ್ನು ವರ್ಗಾಯಿಸಿದೆ.
ಯುಪಿಸಿಎಲ್ ಈ ಮೊದಲು ಅದಾನಿ ಗ್ರೂಪ್‌ನ ಅಂಗಸಂಸ್ಥೆಯಾಗಿತ್ತು. 600 ಮೆಗಾವಾಟ್‌ನ ಎರಡು ಘಟಕಗಳನ್ನು ಸ್ಥಾಪಿಸಲು ಯುಪಿಸಿಎಲ್‌ಗೆ ಪರಿಸರ ಸಚಿವಾಲಯವು ಪರಿಸರ ಅನುಮತಿ ನೀಡಿತ್ತು.
ಪರಿಸರ ಸಚಿವಾಲಯದ ನಿರ್ಧಾರವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ (ಎನ್‌ಜಿಟಿ) ಪ್ರಶ್ನಿಸಲಾಗಿತ್ತು. ಇದರ ಮಧ್ಯೆಯೇ ಹೊಸದಾಗಿ 800 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಸ್ಥಾಪಿಸಲು ಸಚಿವಾಲಯವು ಕಂಪನಿಗೆ ಅನುಮಿತಿ ನೀಡಿತ್ತು. ಸಚಿವಾಲಯದ ಈ ನಿರ್ಧಾರವನ್ನೂ ಎನ್‌ಜಿಟಿಯಲ್ಲಿ ಪ್ರಶ್ನಿಸಲಾಗಿತ್ತು.
ಅದಾನಿ ಗ್ರೂಪ್‌ನ ಅಂಗಸಂಸ್ಥೆಯಾಗಿದ್ದ ಯುಪಿಸಿಎಲ್ ಅನ್ನು, ಈ ಮಧ್ಯೆ ಅದಾನಿ ಪವರ್ ಲಿಮಿಟೆಡ್‌ನೊಂದಿಗೆ ವಿಲೀನ ಮಾಡಲಾಗಿತ್ತು.
ಯುಪಿಸಿಎಲ್‌ನ ಧಾರಣಾ ಸಾಮರ್ಥ್ಯ ವರದಿ ಮತ್ತು ತಜ್ಞರ ಸಮಿತಿಯು ತೀವ್ರ ವಾಯುಮಾಲಿನ್ಯ ಮತ್ತು ಜಲಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಎನ್‌ಜಿಟಿ, ಯುಪಿಸಿಎಲ್‌ಗೆ ₹53.02 ಕೋಟಿ ಮೊತ್ತದ ಪರಿಸರ ಪರಿಹಾರ ದಂಡವನ್ನು ವಿಧಿಸಿತ್ತು. ಜತೆಗೆ, ಈ ಕಲ್ಲಿದ್ದಲು ಉಷ್ಣ ವಿದ್ಯುತ್ ಘಟಕಗಳಿಂದ ಪರಿಸರದ ಮೇಲಾಗುವ ಪರಿಣಾಮದ ಅಂದಾಜಿಗಾಗಿ ವಿಸ್ತೃತ ಅಧ್ಯಯನ ನಡೆಸುವಂತೆ 2022ರ ಮೇನಲ್ಲಿ ತೀರ್ಪು ನೀಡಿತ್ತು. ಇದರ ವಿರುದ್ಧ ಅದಾನಿ ಪವರ್ ಲಿಮಿಟೆಡ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ.
ಇದರ ಮಧ್ಯೆಯೇ, ಯುಪಿಸಿಎಲ್‌ನ 600 ಮೆಗವಾಟ್‌ನ ಎರಡು ಘಟಕಗಳ ಕಾರ್ಯಾಚರಣೆ ಮತ್ತು 800 ಮೆಗಾವಾಟ್‌ನ ಎರಡು ಘಟಕಗಳ ಸ್ಥಾಪನೆಗೆ ನೀಡಿದ್ದ ಪರಿಸರ ಅನುಮತಿಯನ್ನು ತನಗೆ ವರ್ಗಾಯಿಸುವಂತೆ ಅದಾನಿ ಪವರ್ ಲಿಮಿಟೆಡ್ ಪರಿಸರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅದನ್ನು ಮಾನ್ಯ ಮಾಡಿರುವ ಪರಿಸರ ಸಚಿವಾಲಯವು, ಎರಡೂ ಪರಿಸರ ಅನುಮತಿಗಳನ್ನು ಅದಾನಿ ಪವರ್ ಲಿಮಿಟೆಡ್‌ಗೆ ವರ್ಗಾಯಿಸಿದೆ.
ಪ್ರತಿಕ್ರಿಯೆಗಾಗಿ ಪರಿಸರ ಸಚಿವಾಲಯವನ್ನು ಸಂಪರ್ಕಿಸಲಾಯಿತಾದರೂ, ಪ್ರತಿಕ್ರಿಯೆ ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.