ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಭದ್ರತೆಗೆ ಡಿಜಿ ಲಾಕರ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಾಗಾರದ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಕುರಿತ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಅವರು, ‘ಎಸ್ಸೆಸ್ಸೆಲ್ಸಿಯಿಂದ ಉನ್ನತ ಶಿಕ್ಷಣದ ಕೊನೆ ಹಂತದವರೆಗೂ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿ ಭದ್ರವಾಗಿರಿಸುವ ಯೋಜನೆಯಿದು. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ದಾಖಲೆಗಳು ಸುರಕ್ಷಿತವಾಗಿ ಇರಲಿದೆ. ಅಲ್ಲದೆ, ಇನ್ನು ಮುಂದೆ ಕಾಗದ ರೂಪದ ಯಾವುದೇ ಶೈಕ್ಷಣಿಕ ದಾಖಲೆಗಳಿಗೆ ಅವಕಾಶ ಇರುವುದಿಲ್ಲ’ ಎಂದರು.
‘ಡಿಜಿ ಲಾಕರ್ ವ್ಯವಸ್ಥೆಗೆ ಜಾರಿಗೆ ಉನ್ನತಾಧಿಕಾರ ಸಮಿತಿ ರಚಿಸಲಾಗಿದ್ದು, ಅದರ ನೇತೃತ್ವವನ್ನು ನಾನೇ ವಹಿಸಲಿದ್ದೇನೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲಿಸಲಾಗುವುದು. ಸರ್ಕಾರಿ, ಖಾಸಗಿ ಸೇರಿದಂತೆ ಯಾವುದೇ ಪದವಿ ಪ್ರದಾನ ಮಾಡುವ ವಿಶ್ವವಿದ್ಯಾಲಯ, ಕಾಲೇಜು, ಡೀಮ್ಡ್ ವಿಶ್ವವಿದ್ಯಾಲಯಗಳು ಈ ವ್ಯವಸ್ಥೆಗೆ ಕಡ್ಡಾಯವಾಗಿ ಸೇರ್ಪಡೆಯಾಗಬೇಕು’ ಎಂದು ಸೂಚಿಸಿದರು.
‘ರಾಜ್ಯದಲ್ಲಿ 2003ರಿಂದ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, 2008ರಿಂದ ದ್ವಿತೀಯ ಪಿಯುಸಿ ಅಂಕಪಟ್ಟಿ ಡಿಜಿಟಲೀಕರಣ ಮಾಡಲಾಗಿದೆ. ಮುದ್ರಿತ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರೂ ಆ ದತ್ತಾಂಶ ನಮ್ಮಲ್ಲಿ ಇದೆ. ಅದನ್ನು ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರದ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲಾಗುವುದು’ ಎಂದರು.
‘ಪ್ರತಿ ವಿದ್ಯಾರ್ಥಿ ಆಧಾರ್ ಸಂಖ್ಯೆ ಮೂಲಕ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರದ ಪೋರ್ಟಲ್‌ಗೆ ನೋಂದಣಿ ಮಾಡಿಕೊಳ್ಳಬಹುದು. ಅದರಲ್ಲಿ ಇ-ಕೆವೈಸಿಯನ್ನು ತುಂಬಿ ಅಪ್‌ಲೋಡ್ ಮಾಡಿದ ನಂತರ ಎಲ್ಲ ದಾಖಲೆಗಳನ್ನು ಯಾವುದೇ ವಿದ್ಯಾರ್ಥಿಯೂ ಪಡೆದುಕೊಳ್ಳಬಹುದು. ಎಲ್ಲ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳ ದಾಖಲೆಗಳನ್ನು ಡಿಜಿಟಲ್ ಸಹಿಯೊಂದಿಗೆ ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕು’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.