ನವದೆಹಲಿ: ಹನಿ ನೀರಾವರಿ ಮೂಲಕ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಹಾಗೂ ಅಗತ್ಯ ಅನುದಾನ ನೀಡಬೇಕು ಎಂದು ರಾಜ್ಯಸಭೆಯ ಜೆಡಿಎಸ್ ಸದಸ್ಯ ಎಚ್.ಡಿ.ದೇವೇಗೌಡ ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಸೋಮವಾರ ಪಾಲ್ಗೊಂಡು ಸುಮಾರು 40 ನಿಮಿಷ ಮಾತನಾಡಿದ ಅವರು, ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟದ ಸ್ಥಿತಿಯನ್ನು ಬಿಚ್ಚಿಟ್ಟರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕದಲ್ಲಿ ಜೆಡಿಎಸ್‌ನ ಇಬ್ಬರು ಸಂಸದರು ಆಯ್ಕೆಯಾಗಿದ್ದಾರೆ. ಒಬ್ಬರು ಕೇಂದ್ರ ಸಚಿವರಾಗಿದ್ದಾರೆ. ಪಕ್ಷದ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದ ಅವರು, ‘ಹಳೆಯ ಮೈಸೂರು ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಭಾಗದಲ್ಲಿ ಈ ಸಲ ಎನ್‌ಡಿಎ ಮೈತ್ರಿಕೂಟದ ಒಂಬತ್ತು ಸಂಸದರು ಆಯ್ಕೆಯಾಗಿದ್ದಾರೆ. ನಮ್ಮ ಮೈತ್ರಿಕೂಟದ ಮೇಲೆ ಜನರು ವಿಶ್ವಾಸ ಇರಿಸಿದ್ದಾರೆ. ನೀರಿನ ಸಮಸ್ಯೆಗಳಿಂದ ಬಸವಳಿದ ಜನರು ನಮ್ಮ ಕೈ ಹಿಡಿದಿದ್ದಾರೆ. ಅವರ ಸಮಸ್ಯೆ ಬಗೆಹರಿಸುವುದು ನಮ್ಮ ಕರ್ತವ್ಯ ಎಂದು ಪ್ರತಿಪಾದಿಸಿದರು.
‘ನಾನು ಇಲ್ಲಿ ಯಾರ ಮನಸ್ಸನ್ನು ನೋಯಿಸಲು ಇಷ್ಟ ಪಡುವುದಿಲ್ಲ. ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಿದೆ. ನಾನು ಈಗ ನ್ಯಾಯಾಂಗ, ಪ್ರಾಧಿಕಾರ ಅಥವಾ ಇತರ ಯಾವುದೇ ಸಂಸ್ಥೆಯನ್ನು ಟೀಕಿಸಲು ಹೋಗುವುದಿಲ್ಲ. 1991ರಲ್ಲಿ ಕಾವೇರಿ ಪ್ರಾಧಿಕಾರ ಆದೇಶ ನೀಡುವಾಗ ಬೆಂಗಳೂರಿನ ಜನಸಂಖ್ಯೆ 84 ಲಕ್ಷ ಆಗಿತ್ತು. ಈಗ ಜನಸಂಖ್ಯೆ 1.34 ಕೋಟಿಗೆ ಏರಿದೆ. ಕುಡಿಯುವ ನೀರು ಜನರ ಮೂಲಭೂತ ಹಕ್ಕು. ನೀರಿನ ಸಮಸ್ಯೆಯಿಂದ ಬೆಂಗಳೂರಿನ ಜನರು ತತ್ತರಿಸಿದ್ದಾರೆ’ ಎಂದರು.
ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಜುಲೈ 10ರಂದು ಶಿಫಾರಸು ಮಾಡಿತ್ತು. 20 ದಿನಗಳಲ್ಲಿ 19 ಟಿಎಂಸಿ ನೀರು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ದೇವರು ಕರುಣೆ ತೋರಿದ್ದರಿಂದ ರಾಜ್ಯ ಸಂಕಷ್ಟದಿಂದ ಪಾರಾಯಿತು. ಒಂದು ವೇಳೆ, ಮಳೆ ಕೈ ಕೊಟ್ಟಿದ್ದರೆ ನಾವು ತಮಿಳುನಾಡಿಗೆ ನೀರು ಬಿಡುತ್ತಿರಲಿಲ್ಲ’ ಎಂದು ಅವರು ಹೇಳಿದರು. ಕಾವೇರಿ ಜಲವಿವಾದ 200 ವರ್ಷಗಳಿಂದ ಇದೆ. ಕಾವೇರಿ ಜಲವಿವಾದದ ಬಗ್ಗೆ ಇವತ್ತು ಹೆಚ್ಚು ಮಾತನಾಡಲು ಹೋಗುವುದಿಲ್ಲ’ ಎಂದರು.
ಕೇಂದ್ರದ ಬಜೆಟ್‌ನಲ್ಲಿ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ವಿಶೇಷ ಅನುದಾನ ನೀಡಿದ್ದು ತಪ್ಪಲ್ಲ ಎಂದು ಪ್ರತಿಪಾದಿಸಿದ ಅವರು, ‘ದೇಶದ ಕೃಷಿ ಸಮುದಾಯ ಬಿಕ್ಕಟ್ಟು ಎದುರಿಸುತ್ತಿದೆ. ಕೃಷಿ ಕ್ಷೇತ್ರದಲ್ಲಿ ದುಡಿಯುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಕೃಷಿ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಸರ್ಕಾರಗಳು ಹೆಚ್ಚು ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.