ಬೆಂಗಳೂರು: ‘ಏ ಮನಗೂಳಿ ಮಾಮಾ, ನಮ್ಗ ನೀರಾವರಿ ವ್ಯವಸ್ಥೆ ಮಾಡಾಕ ಬೇಕಾದಷ್ಟು ರೊಕ್ಕ ತಂದು ಕೃಷ್ಣಾ ಯೋಜನೆ ಪೂರ್ತಿ ಮಾಡಿದ್ರ, ನಿನ್ಗ ರೇಷ್ಮಿ ಪಟಗಾ ಸುತ್ತಿ, ಬಂಗಾರದ ಉಂಗುರ ತೊಡಿಸಿ, ಎತ್ತಿನ ಬಂಡ್ಯಾಗ ಸಿದ್ದೇಶ್ವರನ ಗುಡಿಯಿಂದ ಸಿಂದಗಿ ಮಟ ಮೆರವಣಿಗಿಯೊಳಗ ಕರ್ಕೊಂಡು ಹೊಕ್ಕೀವಿ’
–ಇದು ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ, ವಿಧಾನಸಭೆಯಲ್ಲಿ ಮಂಗಳವಾರ ಸಚಿವ ಎಂ.ಸಿ. ಮನಗೂಳಿ ಅವರಿಗೆ ಹಾಕಿದ ಸವಾಲು.
‘ಅಲ್ಲೋ ಅಳಿಯಾ ದೇವ್ರ, ನೀನು ಮೆರವಣಿಗಿ ಮಾಡ್ತೀನಿ ಅಂದ್ರ ಬಸನಗೌಡ (ಪಾಟೀಲ) ಬಿಡಂಗಿಲ್ಲ. ಹೋಗ್ಲಿ ನಮ್ ಜನ ಐದು ವರ್ಸ ನಿಮ್ಗss ಅಧಿಕಾರ ಕೊಟ್ಟಿದ್ರಲ್ಲ, ನೀವು ಏನ್ ಮಾಡೀರಿ ಹಂಗಾದ್ರ’ ಎಂದು ಮನಗೂಳಿ ಮರುಪ್ರಶ್ನೆ ಹಾಕಿದರು.
‘ಅಯ್ಯೋ ಮಾವ ಕೇಳಿಲ್ಲಿ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಮುಗಿಯುವತನಕ ಚಪ್ಪಲಿ ಮೆಟ್ಟಂಗಿಲ್ಲ ಅಂತ ಪಣತೊಟ್ಟಿದ್ಯಲ್ಲ? ದೇವೇಗೌಡ್ರು ಸಿಂದಗಿಗೆ ಬಂದಾಗ ಚಪ್ಪಲಿ ತರಿಸಿ ನಿನ್ಗ ಹಾಕ್ಸಿದ್ದು ನೆಪ್ಪೈತೋ ಇಲ್ಲೋ? ನೀ ಏನೋ ಚಪ್ಪಲಿ ಹಾಕೀದಿ. ಆದ್ರ ಇಷ್ಟ್ ವರ್ಸ ಆದ್ರೂ ಗುತ್ತಿ ಬಸವಣ್ಣನ ಯೋಜನೆಗೆ ಇನ್ನss ಮುಕ್ತಿ ಸಿಕ್ಕಿಲ್ಲ ನೋಡು’ ಎಂದು ಕಾರಜೋಳ ಕಾಲೆಳೆದರು.
‘ಈ ಮಾಮಾ, ನೀನು ಏನೂ ಮಾಡ್ಲಿಲ್ಲ ಬಿಡೋ’ ಎಂದು ಬಸನಗೌಡ ಕೂಡ ಚರ್ಚೆಗೆ ರಂಗು ತುಂಬಿದರು. ‘ಏಯ್, ಹಂಗೆಲ್ಲ ಅನ್‌ಬ್ಯಾಡ. ಆಗ್ಲೇ 136 ಕಿಲೊ ಮೀಟರ್ ಕಾಲುವೆ ಆಗೈತೆಲ್ಲ’ ಎಂದು ಸಚಿವರು ಮಾರುತ್ತರ ನೀಡಿದರು.
ಮಧ್ಯ ಪ್ರವೇಶಿಸಿದ ಬಸವರಾಜ ಬೊಮ್ಮಾಯಿ, ‘ನೀವು ಈಗ ಸಚಿವರಿದ್ದೀರಿ. ಚಪ್ಪಲಿ ಬಿಟ್ಟೆ, ಟೊಪಿಗಿ ಬಿಟ್ಟೆ ಅಂತ ಮಾಡಬ್ಯಾಡ್ರಿ. ಮುಖ್ಯಮಂತ್ರಿ ಜೊತಿ ಜಗಳಾ ಆಡಿ ರೊಕ್ಕ ತಗೊಂಬರ‍್ರಿ’ ಎಂದು ಸಲಹೆ ನೀಡಿದರು. ಆಗ ಸದನ ನಗೆಗಡಲಲ್ಲಿ ತೇಲಿತು.
ಪಂಚಾಯಿತಿ ಮೆಂಬರ‍್ರಾ?: ಬಜೆಟ್ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾರಜೋಳ ಅವರಿಗೆ ಬೇಗ ಮಾತು ಮುಗಿಸುವಂತೆ ಅಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಹೇಳಿದರು.
‘ಸರ್, ಚರ್ಚೆ ಮಾಡಾಕ ಕಡಿಮಿ ಟೈಮು ಇಟ್ಟಾರ. ನಮ್ಮನ್ನ ಪಂಚಾಯಿತಿ ಮಟ್ಟಕ್ಕೆ ಇಳಿಸಿ ಬಿಟ್ಟಾರ. ನಮ್ ಮನಿ ಮಗ್ಗಲಿನ ಮನುಷ್ಯ ಪಂಚಾಯಿತಿ ಸದಸ್ಯ ಆಗಿದ್ದ. ಸಭೆಯೊಳಗ ಏನ್ ಮಾಡಿದೆಪ ಅಂತ ನಾನು ಆತನನ್ನ ಕೇಳಿದೆ. ‘ಚುರುಮುರಿ ತಿಂದು, ಚಹಾ ಕುಡಿದು ಬಂದೆ’ ಅಂದ. ನೀವು ಕೊಡುವ ಭತ್ಯೆ ನನಗೇನೋ ಸಾಲ್ತೈತಿ. ಆದ್ರ ಬಸನಗೌಡ, ಉಮೇಶ ಕತ್ತಿ ಅಂಥವರಿಗೆ ರಾತ್ರಿ ಊಟಕ್ಕ ಸಾಲೂದಿಲ್ಲ’ ಎಂದು ಕಾರಜೋಳ ತಮಾಷೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.