ADVERTISEMENT

ಯುಪಿಎಸ್‌ಸಿ: ಪ್ರಶ್ನೆ ಪತ್ರಿಕೆ ಈ ಬಾರಿಯೂ ಕನ್ನಡದಲ್ಲಿಲ್ಲ

ವಿಜಯಕುಮಾರ್ ಎಸ್.ಕೆ.
Published 13 ಮೇ 2022, 23:15 IST
Last Updated 13 ಮೇ 2022, 23:15 IST
   

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆ ಜೂನ್ 5 ರಂದು ದೇಶದಾದ್ಯಂತ ನಡೆಯಲಿದ್ದು, ಈ ಬಾರಿಯೂ ಪ್ರಶ್ನೆ ಪತ್ರಿಕೆಗಳು ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಇಲ್ಲ. ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪ್ರಶ್ನೆ ಪತ್ರಿಕೆ ಇರಲಿದ್ದು, ಇದು ಕನ್ನಡಿಗ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಎ’ ಮತ್ತು ‘ಬಿ’ ದರ್ಜೆಯ ಹುದ್ದೆಗಳಿಗೆ ಯುಪಿಎಸ್‌ಸಿ ಮೂರು ರೀತಿಯ ಪರೀಕ್ಷೆ ನಡೆಸುತ್ತದೆ. ಮೊದಲನೆಯದಾಗಿ ಪೂರ್ವಭಾವಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಓದಿಕೊಂಡು ಉತ್ತರ ಪತ್ರಿಕೆಯಲ್ಲಿ (ಒಎಂಆರ್‌ ಶೀಟ್‌) ಸರಿ ಉತ್ತರದ ಸಂಖ್ಯೆಯನ್ನು ಗುರುತು ಮಾಡುವ ವಿಧಾನ ಇರುತ್ತದೆ. ಆದರೆ, ಪ್ರಶ್ನೆಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಇರುತ್ತವೆ.

ಮುಖ್ಯ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರ ಬರೆಯಬೇಕಾಗುತ್ತದೆ. ಅಲ್ಲಿಯೂ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲೇ ಇರುತ್ತವೆ. ಆದರೆ, ಉತ್ತರವನ್ನುಸಂವಿಧಾನ ಮಾನ್ಯ ಮಾಡಿರುವ ಯಾವುದೇ ಭಾಷೆಯಲ್ಲಿ ಬರೆಯಲು ಅವಕಾಶ ಇದೆ. ‘ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅನ್ಯಭಾಷೆಯಲ್ಲಿ ಇರುವುದರಿಂದಲೇ ಆ ಪರೀಕ್ಷೆಯಲ್ಲೇ ಹೆಚ್ಚು ಅಭ್ಯರ್ಥಿಗಳು ವಿಫಲವಾಗುತ್ತಿದ್ದಾರೆ’ ಎಂಬುದು ಅಭ್ಯರ್ಥಿಗಳ ಅಭಿಪ್ರಾಯ.

ADVERTISEMENT

‘ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಇರುವ ಪ್ರಶ್ನೆ ಪತ್ರಿಕೆಯನ್ನು ಓದಿಕೊಂಡು ಉತ್ತರ ಗುರುತು ಮಾಡುವುದು ಕನ್ನಡ ಸೇರಿ ಪ್ರಾದೇಶಿಕ ಭಾಷೆಯ ಅಭ್ಯರ್ಥಿಗಳಿಗೆ ಕಷ್ಟ. ಆದ್ದರಿಂದಲೇ ಬಹುತೇಕರು ಮುಖ್ಯ ಪರೀಕ್ಷೆಗೆ ಅರ್ಹತೆಯನ್ನೇ ಪಡೆದುಕೊಳ್ಳುವುದಿಲ್ಲ. ಮಾತೃ ಭಾಷೆಯಲ್ಲಿ ಪಡೆದ ಶಿಕ್ಷಣದಿಂದ ಅಗಾಧ ಜ್ಞಾನ ಹೊಂದಿದ್ದರೂ, ಪ್ರಶ್ನೆಗಳೇ ಅರ್ಥವಾಗದೆ ಐಎಎಸ್‌, ಐಪಿಎಸ್‌ ರೀತಿಯ ಹುದ್ದೆಗಳಿಂದ ಕನ್ನಡಿಗರ ವಂಚಿತರಾಗುತ್ತಿದ್ದಾರೆ’ ಎಂಬುದು ಅವರ ಆಕ್ಷೇಪ.

‘ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎಲ್ಲ ಭಾರತೀಯ ಭಾಷೆಗಳಲ್ಲೂ ಇರುವಂತೆ ನೋಡಿಕೊಳ್ಳುವುದೇ ನ್ಯಾಯ. ಆದರೆ, ಹಿಂದಿ ಭಾಷೆಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಪ್ರಶ್ನೆ ಪತ್ರಿಕೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅವಕಾಶ ಎಲ್ಲ ಭಾಷಿಕರಿಗೂ ದೊರೆಯಬೇಕು. ಈ ಸಂಬಂಧ ಹೋರಾಟ ಮತ್ತು ಜಾಗೃತಿ ನಡೆಸಲಾಗುವುದು’ ಎಂದು ಬನವಾಸಿ ಬಳಗದ ಅರುಣ್ ಜಾವಗಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.