ADVERTISEMENT

ನಗರ ನಕ್ಸಲ್‌ವಾದ ಆತಂಕಕಾರಿ: ಸ್ವಾಮಿ ಮರಳಾಪುರ ಆತಂಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 13:32 IST
Last Updated 22 ಸೆಪ್ಟೆಂಬರ್ 2018, 13:32 IST
ಕಲಬುರ್ಗಿಯಲ್ಲಿ ಶನಿವಾರ ಆರಂಭವಾದ ಎಬಿವಿಪಿ ಪ್ರಾಂತ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಜಿಲ್ಲೆಗಳ ಮುಖಂಡರು ಪಾಲ್ಗೊಂಡರು
ಕಲಬುರ್ಗಿಯಲ್ಲಿ ಶನಿವಾರ ಆರಂಭವಾದ ಎಬಿವಿಪಿ ಪ್ರಾಂತ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಜಿಲ್ಲೆಗಳ ಮುಖಂಡರು ಪಾಲ್ಗೊಂಡರು   

ಕಲಬುರ್ಗಿ: ‘ದೇಶದಲ್ಲಿ ಇತ್ತೀಚೆಗೆ ನಗರ ನಕ್ಸಲ್‌ವಾದ ಹೆಚ್ಚಾಗಿದೆ. ಇದು ಸಾಮಾಜಿಕ ಅರಾಜಕತೆಗೆ ನಾಂದಿಯಾಗುವ ಅಪಾಯವಿದೆ’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಎಬಿವಿಪಿ ಪ್ರಾಂತ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಾನೊಬ್ಬ ನಕ್ಸಲ್‌ವಾದಿ ಎಂದು ಕೆಲ ಸಾಹಿತಿಗಳು ಬಹಿರಂಗವಾಗಿಯೇ ಹೇಳಿಕೆ ನೀಡುವ ಸ್ಥಿತಿಗೆ ಬಂದಿದ್ದಾರೆ. ಇಂಥ ಮನಸ್ಥಿತಿಯನ್ನು ವಿದ್ಯಾರ್ಥಿ ಪರಿಷತ್‌ ಖಂಡಿಸುತ್ತದೆ’ ಎಂದರು.

‘ಶರಣರ ನಾಡಿನಲ್ಲಿ ಬಹು ವರ್ಷಗಳ ನಂತರ ಪ್ರಾಂತ ಕಾರ್ಯಕಾರಿಣಿ ನಡೆಯುತ್ತಿದೆ. ಈ ನೆಲದ ಗುಣ ನಮ್ಮ ಕಾರ್ಯಕರ್ತರಲ್ಲಿ ಒಡಮೂಡುವಂತಾಗಲಿ. ಎರಡು ದಿನ ನಡೆಯುವ ಸಭೆಯಲ್ಲಿ ದೇಶದ ವರ್ತಮಾನದ ಪರಿಸ್ಥಿತಿ, ಸಾಮಾಜಿಕ ಸ್ಥಿತಿ, ಶೈಕ್ಷಣಿಕ ಕ್ಷೇತ್ರ ಹಾಗೂ ವಿಶ್ವವಿದ್ಯಾಲಯಗಳ ಕಾರ್ಯಚಟುವಟಿಕೆಗಳ ಬಗ್ಗೆ ಅವಲೋಕನ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

‘ಪರಿಷತ್‌ನ ಸಂಘಟನೆಗೆ ಹೆಚ್ಚು ಆಸ್ಥೆ ವಹಿಸಬೇಕಾಗಿದೆ. ಮುಂದಿನ ಹೋರಾಟಗಳು, ಕಾರ್ಯಕ್ರಮಗಳ ರೂಪುರೇಶೆ ಇಲ್ಲಿಂದಲೇ ಸಿದ್ಧವಾಗಲಿದೆ. ಎರಡನೇ ಹಂತದಲ್ಲಿ ಮುಖಂಡರು ಇದನ್ನು ರಾಜ್ಯವ್ಯಾಪಿ ಬಿಂಬಿಸಬೇಕು’ ಎಂದು ಹೇಳಿದರು.

ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ ಉದ್ಘಾಟಿಸಿದರು. ಕಾರ್ಯದರ್ಶಿ ಹರ್ಷ ನಾರಾಯಣ, ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಇದ್ದರು.

ರಾಜ್ಯ ಸಮಿತಿಯ ಪದಾಧಿಕಾರಿಗಳು, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷ, ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿಗಳು ಸೇರಿ 250 ಮುಖಂಡರು ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.