ಬೆಂಗಳೂರು: ಒಕ್ಕಲಿಗ ಸಮಾಜ ಹಾಗೂ ಮಹಿಳೆಯರ ಕುರಿತು ಅಸಭ್ಯವಾಗಿ ಮಾತನಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ನೇತೃತ್ವದ ಒಕ್ಕಲಿಗ ಜನಪ್ರತಿನಿಧಿಗಳ ನಿಯೋಗ, ‘ಮುನಿರತ್ನ ಅವರ ಮಾತುಗಳು ಸಮಾಜದ ಭಾವನೆಗಳಿಗೆ ಧಕ್ಕೆ ತಂದಿವೆ. ಸಮಾಜದ ಹೆಣ್ಣು ಮಕ್ಕಳ ಭಾವನೆಗಳನ್ನು ಗಾಸಿಗೊಳಿಸಿವೆ. ಜಾತಿ ನಿಂದನೆ ಪ್ರಕರಣದಲ್ಲೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.
ಮುನಿರತ್ನ ಅವರಿಂದ ಬೆದರಿಕೆ, ಜಾತಿ ನಿಂದನೆಗೆ ಒಳಗಾಗಿದ್ದಾರೆ ಎನ್ನಲಾದ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರ ಮನೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಚೆಲುವರಾಜು ಅವರ ಪತ್ನಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವ ಭರವಸೆ ನೀಡಿದರು.
ಸಚಿವೆಯ ಜೊತೆ ಮಾತನಾಡುವಾಗ ದುಃಖ ತಡೆಯಲಾದರೆ ಚೆಲುವರಾಜು ಪತ್ನಿ ಬಿಕ್ಕಳಿಸಿ ಅತ್ತರು. ಅವರನ್ನು ತಬ್ಬಿಕೊಂಡು ಲಕ್ಷ್ಮಿ ಹೆಬ್ಬಾಳಕರ್ ಸಮಾಧಾನ ಮಾಡಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು. ಚೆಲುವರಾಜು ಕುಟುಂಬದ ಕುಟುಂಬದ ರಕ್ಷಣೆ ಜವಾಬ್ದಾರಿ ಸರ್ಕಾರದ್ದು. ಧೈರ್ಯವಾಗಿ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹೇಳಿರುವೆ’ ಎಂದರು.
‘ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರಿಗೂ ಪ್ರಕರಣದ ಗಂಭೀರತೆ ಅರ್ಥವಾಗಿದೆ. ಆದರೆ, ವಿರೋಧ ಪಕ್ಷದಲ್ಲಿರುವ ಕಾರಣ ಅನಿವಾರ್ಯವಾಗಿ ಸರ್ಕಾರವನ್ನು ದೂರುತ್ತಿದ್ದಾರೆ. ಮುನಿರತ್ನ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಲಕ್ಷ್ಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.