ಚಿಕ್ಕಮಗಳೂರು: ‘ಉರಿ ಗೌಡ, ನಂಜೇಗೌಡ ಪಾತ್ರಗಳು ಕಾಲ್ಪನಿಕವಲ್ಲ ಎಂಬುದಕ್ಕೆ ‘ಸುವರ್ಣ ಮಂಡ್ಯ’ ಪುಸ್ತಕದಲ್ಲಿ ಉತ್ತರ ಇದೆ. ಉರಿಗೌಡ, ನಂಜೇಗೌಡ ಸಹಿತ ಒಕ್ಕಲಿಗರು ಟಿಪ್ಪು ವಿರುದ್ಧ ತಿರುಗಿಬಿದ್ದಿದ್ದರು ಬಹುಶಃ ಅದಕ್ಕೆ ಆತನ ನೀತಿ ಕಾರಣವಿರಬಹುದು ಎಂದು ಪುಸ್ತಕದಲ್ಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮಜಾಯಿಷಿ ನೀಡಿದರು.
ನಗರದಲ್ಲಿ ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘1994ರಲ್ಲಿ ದೇ.ಜವರೇಗೌಡ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ‘ಸುವರ್ಣ ಮಂಡ್ಯ’ ಕೃತಿಯಲ್ಲಿ ಈ ಪಾತ್ರಗಳು ಇವೆ. 2006ರಲ್ಲಿ ಪುಸ್ತಕ ಮರುಮುದ್ರಣವಾಗಿದ್ದು, ಎಚ್.ಡಿ.ದೇವೇಗೌಡ ಅವರು ಬಿಡುಗಡೆಗೊಳಿಸಿದ್ದಾರೆ. ಈ ಪಾತ್ರಗಳು ಬಿಜೆಪಿಯ ಕಟ್ಟುಕತೆ, ಸಿ.ಟಿ.ರವಿ ಸೃಷ್ಟಿ ಎಂದು ಪ್ರತಿಪಕ್ಷಗಳು ವೃಥಾ ಆರೋಪಿಸುತ್ತಿವೆ’ ಎಂದು ಉತ್ತರಿಸಿದರು.
‘ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರು ಟಿಪ್ಪುವನ್ನು ಕೊಂದರು ಎಂದು ನಾವು ಹೇಳಿದ್ದೇವೆ. ಈ ಬಗ್ಗೆ ಸಂಶೋಧನೆ ನಡೆಯಲಿ. ಮೂಡಲ ಬಾಗಿಲ ಆಂಜನೇಯ ದೇಗುಲವು ಜಾಮೀಯಾ ಮಸೀದಿಯಾಗಿದೆ. ಟಿಪ್ಪುವಿನ ಕಾಲದಲ್ಲೇ ದೇಗುಲವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ’ ಎಂದು ಪ್ರತಿಪಾದಿಸಿದರು.
‘ಕ್ಷೇತ್ರ ಹುಡುಕಾಡುವುದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಗೌರವ ತರುವ ಸಂಗತಿಯಲ್ಲ. ಸುದೀರ್ಘ 45 ವರ್ಷ ರಾಜಕಾರಣ ಮಾಡಿದ್ದಾರೆ. ನಾಯಕರಿಗೆ ಅಭದ್ರತೆ ಕಾಡಬಾರದು’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.