ನವದೆಹಲಿ: ಕಾವೇರಿ ನೀರನ್ನು ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವಿವೇಚನೆಯಿಂದ ಬಳಸಿ ಭವಿಷ್ಯದ ಬಳಕೆಗೆ ಜಲಾಶಯಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.
ಕಾವೇರಿ ಜಲಾನಯನ ಪ್ರದೇಶದ ಜಲವಿಜ್ಞಾನ ಪರಿಸ್ಥಿತಿಯನ್ನು ಪರಿಶೀಲಿಸಲು ಗುರುವಾರ ಇಲ್ಲಿ ಸಭೆ ನಡೆಸಿದ ಪ್ರಾಧಿಕಾರವು ಅನಿಯಮಿತ ಮುಂಗಾರಿನ ಸಂದರ್ಭದಲ್ಲಿ ನೀರನ್ನು ವಿವೇಚನೆಯಿಂದ ಬಳಸುವ ಅಗತ್ಯವನ್ನು ಒತ್ತಿ ಹೇಳಿತು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಈ ವರ್ಷದ ಮುಂಗಾರಿನಲ್ಲಿ ತಮಿಳುನಾಡಿಗೆ ಇಲ್ಲಿಯವರೆಗೆ 71.56 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಇಲ್ಲಿ ತನಕ 170 ಟಿಎಂಸಿ ನೀರು ಬಿಡಲಾಗಿದೆ. ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ತಮಿಳುನಾಡು ಜಮೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಹೇಳಿತು.
ಬಿಳಿಗುಂಡ್ಲುವಿನಲ್ಲಿ ನಿಗದಿತ ಪ್ರಮಾಣಕ್ಕಿಂತ ವಾಸ್ತವವಾಗಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವು, ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದ ಹೆಚ್ಚುವರಿ ಒಳಹರಿವಿನ ಪ್ರಮಾಣದ ಕೊಡುಗೆಯಾಗಿರುತ್ತದೆ. ಹಾಗಾಗಿ, ಕಾವೇರಿ ನ್ಯಾಯಮಂಡಳಿ ಆದೇಶದಂತೆ ಮತ್ತು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನಂತೆ, ಕರ್ನಾಟಕ ರಾಜ್ಯವು ಪ್ರತಿ ತಿಂಗಳ ನಿಗದಿತ ನೀರಿನ ಪ್ರಮಾಣವನ್ನು ಹರಿಸುವಂತೆ ಪ್ರಾಧಿಕಾರವು ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸರ್ಕಾರ ಆಗ್ರಹಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.