ADVERTISEMENT

ಉತ್ತರಾಖಂಡ ಚಾರಣ: ಸಾವಿನ ಸಂಖ್ಯೆ 9ಕ್ಕೆ ಏರಿಕೆ; ರಾಜ್ಯಕ್ಕೆ ಮರಳಿದ 13 ಚಾರಣಿಗರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 16:25 IST
Last Updated 6 ಜೂನ್ 2024, 16:25 IST
<div class="paragraphs"><p>ರಾಜ್ಯಕ್ಕೆ ಮರಳಿದ 13 ಚಾರಣಿಗರು</p></div>

ರಾಜ್ಯಕ್ಕೆ ಮರಳಿದ 13 ಚಾರಣಿಗರು

   

ಬೆಂಗಳೂರು: ಉತ್ತರಾಖಂಡದ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿದ್ದವರ ಪೈಕಿ ರಕ್ಷಣೆಗೆ ಒಳಗಾದ 13 ಮಂದಿಯನ್ನು ಒಳಗೊಂಡ ತಂಡವು ಗುರುವಾರ ರಾತ್ರಿ 9.30ರ ಸುಮಾರಿಗೆ ವಿಮಾನದ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆ ತೆರಳಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಈ ಚಾರಣಿಗರ ಜತೆಗೆ ಬಂದರು. ಅವರು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆಂದು ಡೆಹ್ರಾಡೂನ್‌ಗೆ ಬುಧವಾರ ಬೆಳಿಗ್ಗೆ ತೆರಳಿದ್ದರು. ವಿಮಾನ ನಿಲ್ದಾಣದ ಬಳಿ ಕಾದಿದ್ದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ಬಂದ ಚಾರಣಿಗರನ್ನು ಸ್ವಾಗತಿಸಿದರು.

ADVERTISEMENT

ಚಾರಣದ ವೇಳೆ ಹವಾಮಾನ ವೈಪರೀತ್ಯದಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬುಧವಾರ ಐದು ಮೃತದೇಹಗಳು ಸಿಕ್ಕಿದ್ದವು. ನಾಪತ್ತೆಯಾದ ನಾಲ್ವರ ಪತ್ತೆಗೆ ಪ್ರತಿಕೂಲ ಪರಿಸ್ಥಿತಿಯಿಂದ ಬುಧವಾರ ಸಂಜೆ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ.

ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ ನಾಲ್ವರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಕೆ.ಪಿ.ಪದ್ಮನಾಭ, ಕೆ.ವೆಂಕಟೇಶ್ ಪ್ರಸಾದ್, ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ ಮೃತಪಟ್ಟವರು ಎಂದು ಗುರುತಿಸಲಾಗಿದೆ. ನಾಲ್ಕು ಮೃತದೇಹಗಳನ್ನು ದುರಂತ ಸ್ಥಳದ ಬಳಿಯಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಉತ್ತರಕಾಶಿಗೆ ಸ್ಥಳಾಂತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಾರಣಿಗರ ಪೈಕಿ ರಕ್ಷಣೆ ಮಾಡಲಾದ ಸೌಮ್ಯಾ ಕೆನಾಲೆ, ಸ್ಮೃತಿ ಡೋಲಾಸ್, ಶೀನಾ ಲಕ್ಷ್ಮಿ, ಎಸ್.ಶಿವ ಜ್ಯೋತಿ, ಅನಿಲ್ ಜಮತಿಗೆ ಅರುಣಾಚಲ ಭಟ್, ಭರತ್ ಬೊಮ್ಮನಗೌಡರ್, ಮಧುಕಿರಣ್ ರೆಡ್ಡಿ, ಬಿ.ಎಸ್‌.ಜೈಪ್ರಕಾಶ್ ಅವರನ್ನು ಬುಧವಾರ ಸಂಜೆಯೇ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿತ್ತು. ಎಸ್‌.ಸುಧಾಕರ್‌, ಎಂ.ಕೆ.ವಿನಯ್, ವಿವೇಕ್‌ ಶ್ರೀಧರ್‌, ಎಂ.ನವೀನ್‌, ರಿತಿಕಾ ಜಿಂದಾಲ್‌ ಅವರನ್ನು ಗುರುವಾರ ಬೆಳಿಗ್ಗೆ ಸುರಕ್ಷಿತ ಸ್ಥಳಕ್ಕೆ ಕರೆತಂದ ರಕ್ಷಣಾ ತಂಡಗಳು, ಡೆಹ್ರಾಡೂನ್‌ಗೆ ಹೆಲಿಕಾಪ್ಟರ್‌ನಲ್ಲಿ ಸ್ಥಳಾಂತರಿಸಿದವು. ನಂತರ, ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಯಿತು.

9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹ ರವಾನಿಸುವ ಸಂಬಂಧ ಉತ್ತರಾಖಂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಚಿವ ಕೃಷ್ಣ ಬೈರೇಗೌಡ ಚರ್ಚಿಸಿದ್ದಾರೆ. ಉತ್ತರಕಾಶಿಯಿಂದ ಮೃತದೇಹಗಳನ್ನು ನೇರವಾಗಿ ಬೆಂಗಳೂರಿಗೆ ರವಾನೆ ಮಾಡಲು ಸಾಧ್ಯವಾಗಿಲ್ಲ.

ರಸ್ತೆ ಮಾರ್ಗದ ಮೂಲಕ ಆಂಬುಲೆನ್ಸ್‌ನಲ್ಲಿ ಮೃತದೇಹಗಳನ್ನು ದೆಹಲಿಗೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಮೃತದೇಹ ತರಲಾಗುವುದು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಎಲ್ಲ ಮೃತದೇಹಗಳು ಬೆಂಗಳೂರಿಗೆ ತಲುಪಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.