ಯುಯುಸಿಎಂಎಸ್ ನಿರ್ವಹಣಾ ವೈಫಲ್ಯ: ‘ಅಂಕೆ’ಗೆ ಸಿಗದ ಡಿಜಿಟಲ್ ಅಂಕಪಟ್ಟಿ
* ಉನ್ನತ ಶಿಕ್ಷಣ, ಉದ್ಯೋಗಕ್ಕೂ ಅಡ್ಡಿ
Published 8 ನವೆಂಬರ್ 2024, 0:55 IST Last Updated 8 ನವೆಂಬರ್ 2024, 0:55 IST ಬೆಂಗಳೂರು: ಅಂಕಪಟ್ಟಿಗೆ ಸುರಕ್ಷತೆ ಒದಗಿಸಿ, ನಕಲು ದಂಧೆಗೆ ಕೊನೆ ಹಾಡಲು ಪರಿಚಯಿಸಿದ ಡಿಜಿಟಲ್ ವ್ಯವಸ್ಥೆಯೇ ಈಗ ಕಂಟಕವಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಅಂಕಪಟ್ಟಿಗಳಿಂದ ಅಂಕಗಳೇ ನಾಪತ್ತೆಯಾಗಿವೆ.
ಪ್ರತಿ ವಿಶ್ವವಿದ್ಯಾಲಯವೂ ತನ್ನ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ನಂತರ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿಗಳನ್ನು (ಹಾರ್ಡ್ ಕಾಪಿ) ವಿತರಿಸುತ್ತಿತ್ತು. ಉನ್ನತ ಶಿಕ್ಷಣ ಇಲಾಖೆಯು 2021–22ನೇ ಸಾಲಿನಿಂದ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯನ್ನು (ಯುಯುಸಿಎಂಎಸ್) ಜಾರಿಗೆ ತಂದಿದೆ. ಅಂದಿನಿಂದ ಎಲ್ಲ ವಿಶ್ವವಿದ್ಯಾಲಯಗಳೂ ಪ್ರತಿ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಯುಯುಸಿಎಂಎಸ್‌ನಲ್ಲಿ ನಮೂದಿಸುತ್ತವೆ. ವಿದ್ಯಾರ್ಥಿಗಳು ತಮ್ಮ ಲಾಗಿನ್ ಮೂಲಕ ಪರೀಕ್ಷಾ ಸಂಖ್ಯೆ ನಮೂದಿಸಿ, ಆಯಾ ವರ್ಷದ ಡಿಜಿಟಲ್ ಅಂಕಪಟ್ಟಿ ಪಡೆಯಬಹುದು.
ಪ್ರತಿ ಸೆಮಿಸ್ಟರ್‌ನಲ್ಲೂ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳು ಈಗ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡರೆ ಅದರಲ್ಲಿ ಅಂಕಗಳೇ ನಾಪತ್ತೆಯಾಗಿವೆ. ಅವರ ಉನ್ನತ ಶಿಕ್ಷಣ, ಉದ್ಯೋಗದ ಕನಸುಗಳು ಭಗ್ನವಾಗಿವೆ. ಪದವಿ ಮುಗಿಸಿದ ಹಲವು ವಿದ್ಯಾರ್ಥಿಗಳು ಮೂರು ವರ್ಷಗಳ ಡಿಜಿಟಲ್ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡಾಗ ಮೊದಲ ಹಾಗೂ ಎರಡನೇ ವರ್ಷದ ಪದವಿಯ ನಾಲ್ಕು ಸೆಮಿಸ್ಟರ್‌ಗಳಲ್ಲಿ ಅವರು ಅನುತ್ತೀರ್ಣರಾಗಿದ್ದಾರೆಂದು ಅಂಕಪಟ್ಟಿ ತೋರಿಸುತ್ತಿದೆ. ಅಂತಹ ವಿದ್ಯಾರ್ಥಿಗಳು ತಾವು ಓದಿದ ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ನಿತ್ಯವೂ ಅಲೆಯುವಂತಾಗಿದೆ. ಪರೀಕ್ಷಾ ವಿಭಾಗದ ಮುಂದೆ ಅಂಕಪಟ್ಟಿ ತಿದ್ದುಪಡಿಗೆ ನಿಂತವರ ಸರದಿ ಸಾಲು ಬೆಳೆಯುತ್ತಲೇ ಇದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ತಿದ್ದುಪಡಿ ಸಾಧ್ಯವಾಗದೇ ಹೈರಾಣಾಗುತ್ತಿದ್ದಾರೆ.
ಉನ್ನತ ಶಿಕ್ಷಣ, ಉದ್ಯೋಗಕ್ಕೂ ಅಡ್ಡಿ: ಪದವಿ ಪೂರೈಸಿ ಎಂ.ಎ, ಎಂ.ಕಾಂ, ಎಂ.ಎಸ್‌ಸಿ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿದ, ಎಂ.ಬಿ.ಎ, ಎಂ.ಸಿ.ಎ ಮೊದಲಾದ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದ ಹಲವು ವಿದ್ಯಾರ್ಥಿಗಳಿಗೆ ಅಂಕಗಳ ದೋಷದ ಕಾರಣ ಸೀಟು ಪಡೆಯಲು ಸಾಧ್ಯವಾಗಿಲ್ಲ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲೂ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.
‘ಶಿವಮೊಗ್ಗದ ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಮಗಳು ಈ ಬಾರಿ ಬಿ.ಸಿ.ಎ ಮುಗಿಸಿದ್ದಾಳೆ. ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆಯಲು ಡಿಜಿಟಲ್ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡಾಗ ಮೂರನೇ ಸೆಮಿಸ್ಟರ್ ಅಂಕಪಟ್ಟಿಯೇ ಮಾಯವಾಗಿದೆ. ಈ ಕುರಿತು ಕಾಲೇಜಿನ ಪ್ರಾಶುಪಾಲರು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಿಗೆ ಪತ್ರ ಕೊಟ್ಟಿದ್ದಾರೆ. ದೂರದ ಊರಿನಿಂದ ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ಅಲೆದು ಸಾಕಾಗಿದೆ. ಒಂದು ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ’ ಎನ್ನುತ್ತಾರೆ ಪೋಷಕ ಭಾಗಜ್ಜಿ ಮಂಜಪ್ಪ.
‘ನಿಯಮದ ಪ್ರಕಾರ ಬೇಡಿಕೆ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ನೀಡುವುದು ಕಡ್ಡಾಯ. ಆದರೆ, ಬಹುತೇಕ ವಿಶ್ವವಿದ್ಯಾಲಯಗಳು ನೀಡುತ್ತಿಲ್ಲ. ಹಲವು ಕಂಪನಿಗಳು ಉದ್ಯೋಗ ನೀಡುವಾಗ ಡಿಜಿಟಲ್ ಅಂಕಪಟ್ಟಿ ನಿರಾಕರಿಸುತ್ತಿವೆ. ಇದರಿಂದ ಉದ್ಯೋಗಕ್ಕೂ ಅಡ್ಡಿಯಾಗಿದೆ’ ಎನ್ನುತ್ತಾರೆ ಪದವೀಧರ ವಿದ್ಯಾರ್ಥಿ ಅನಿಲ್‌ಕುಮಾರ್.
ಕಾಲೇಜುಗಳಿಗೆ ನೋಟಿಸ್
ಎಂಜಿನಿಯರಿಂಗ್ ಕೋರ್ಸ್‌ಗಳ ‘ಸೀಟ್ ಬ್ಲಾಕಿಂಗ್’ ಪ್ರಕರಣದಲ್ಲಿ ಕಾಲೇಜುಗಳಿಗೆ ನೋಟಿಸ್ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ. ‘ಸೀಟು ಹಂಚಿಕೆಯಾಗಿದ್ದರೂ, ಎಂಜಿನಿಯರಿಂಗ್ ಕಾಲೇಜುಗಳಿಗೆ ಏಕೆ ಪ್ರವೇಶ ಪಡೆದಿಲ್ಲ’ ಎಂದು ಪ್ರಶ್ನಿಸಿ ಕೆಇಎ ನೀಡಿದ್ದ ನೋಟಿಸ್‌ಗೆ ಶೇ 80ರಷ್ಟು ವಿದ್ಯಾರ್ಥಿಗಳು ‘ಈ ಕುರಿತು ತಮಗೆ ಮಾಹಿತಿಯೇ ಇಲ್ಲ’ ಎಂದು ಉತ್ತರಿಸಿದ್ದಾರೆ. ಹಾಗಾಗಿ, ಸಿಇಟಿ ಮೂಲಕ ಹಂಚಿಕೆಯಾದ ಬೇಡಿಕೆ ಇರುವ ಕೋರ್ಸ್‌ಗಳ ಸೀಟುಗಳು ಅಧಿಕ ಸಂಖ್ಯೆಯಲ್ಲಿ ಉಳಿದಿರುವ ಕಾಲೇಜುಗಳಿಗೆ ವಿವರಣೆ ಕೇಳಿ ನೋಟಿಸ್ ನೀಡಲಾಗುತ್ತಿದೆ. ಸಿಇಟಿಯಲ್ಲಿ ಉನ್ನತ ರ್‍ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಪ್ರಮುಖ ಕಾಲೇಜುಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದಾರೆ ಎಂದು ಕೆಇಎ ದೂರಿತ್ತು. ‘ಸೀಟ್ ಬ್ಲಾಕಿಂಗ್’ ಅಕ್ರಮ ನಡೆದಿರುವ ಶಂಕೆಯ ಮೇಲೆ 2,348 ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿತ್ತು. ‘ಜೆಇಇ, ಕಾಮೆಡ್–ಕೆ ಮತ್ತು ಇತರ ಅರ್ಹತಾ ಪರೀಕ್ಷೆಗಳತ್ತ ಚಿತ್ತ ಹರಿಸಿದ್ದರಿಂದ ಸಿಇಟಿ ಸೀಟು ಹಂಚಿಕೆಯ ಬಗ್ಗೆ ಗಮನಿಸಲಿಲ್ಲ. ಈ ಕುರಿತು ತಮಗೆ ಮಾಹಿತಿಯೇ ಇಲ್ಲ’ ಎಂದು ವಿದ್ಯಾರ್ಥಿಗಳು ನೀಡಿದ ಉತ್ತರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೆಇಎ, ಅಕ್ರಮದಲ್ಲಿ ಆಯಾ ಕಾಲೇಜುಗಳೇ ಭಾಗಿಯಾಗಿರುವ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕುತ್ತಿದೆ.
ಅಂಕಪಟ್ಟಿಗೇ ಕನ್ನ
ಯುಯುಸಿಎಂಎಸ್‌ಗೆ ಅಪ್‌ಲೋಡ್ ಮಾಡಿದ್ದ ಡಿಜಿಟಲ್ ಅಂಕಪಟ್ಟಿಯಲ್ಲಿನ ಅಂಕಗಳು ದಿಢೀರ್ ಏರುಪೇರಾಗುತ್ತಿರುವ ಪ್ರಕರಣದ ತನಿಖೆ ನಡೆಸಲು ಕೋರಿ ಕೆಲ ವಿಶ್ವವಿದ್ಯಾಲಯಗಳು ಪೊಲೀಸ್ ಠಾಣೆಯ ಮೆಟ್ಟಲೇರಿವೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಯುಯುಸಿಎಂಎಸ್ ತಂತ್ರಾಂಶದ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ. ಅನುತ್ತೀರ್ಣರಾದ ಕೆಲ ವಿದ್ಯಾರ್ಥಿಗಳ ಅಂಕಗಳಲ್ಲಿ ಹೆಚ್ಚಳವಾಗಿ ತೇರ್ಗಡೆಯಾಗಿದ್ದಾರೆ ಎಂದು ಪರೀಕ್ಷಾಂಗ ಕುಲಸಚಿವ ಕೆ. ತಿಪ್ಪೇಸ್ವಾಮಿ ಕೋಲಾರದ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆಯಲ್ಲಿ (ಸೆನ್) ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೆಲ ವಿಶ್ವವಿದ್ಯಾಲಯಗಳಲ್ಲಿ ವಂಚಕರ ಗುಂಪುಗಳು ವಿದ್ಯಾರ್ಥಿಗಳಿಂದ ಹಣ ಪಡೆದು ವೆಬ್‌ಸೈಟ್‌ಗೆ ಲಾಗಿನ್ ಆಗಿ ಅಂಕ ಬದಲಾವಣೆ ಹಾಗೂ ಅನುತ್ತೀರ್ಣರಾದವರನ್ನು ತೇರ್ಗಡೆ ಮಾಡಿಸುತ್ತಿರುವುದು ಪತ್ತೆಯಾಗಿವೆ. ಎಂ.ಬಿ.ಎ ಹಾಗೂ ಎಂ.ಸಿ.ಎ ಅಂಕಪಟ್ಟಿಗಳೇ ಅಧಿಕ ಸಂಖ್ಯೆಯಲ್ಲಿ ತಿದ್ದುಪಡಿಗೆ ಒಳಗಾಗಿವೆ.
ತಾಂತ್ರಿಕ ದೋಷ, ಪರದಾಟ
ಹಲವು ವಿಶ್ವವಿದ್ಯಾಲಯಗಳು 2024–25ನೇ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿವೆ. ಯುಯುಸಿಎಂಎಸ್ ತಂತ್ರಾಂಶದಲ್ಲಿ ದೋಷಗಳು ಕಾಣಿಸಿಕೊಂಡ ಕಾರಣ ಮತ್ತೊಂದು ಸುತ್ತೋಲೆ ಹೊರಡಿಸಿ, ಭೌತಿಕವಾಗಿ ಅರ್ಜಿ ಸಲ್ಲಿಸಲು ಸೂಚಿಸಿವೆ. ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕೆಲ ಕಾಲೇಜುಗಳಲ್ಲಿ ಪ್ರಥಮ ಸೆಮಿಸ್ಟರ್ ಫಲಿತಾಂಶ ಎರಡು ವರ್ಷವಾದರೂ ಪ್ರಕಟಗೊಂಡಿಲ್ಲ, ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿಯೇ ಸಿಕ್ಕಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಅಧ್ಯಯನಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡಿಜಿಲಾಕರ್‌ನಿಂದ ಅಂಕಪಟ್ಟಿ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳುವಾಗ ತೊಂದರೆ ಎದುರಿಸುತ್ತಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಎಚ್.ದೇವೇಂದ್ರಪ್ಪ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.