ADVERTISEMENT

ನಿರ್ದೇಶಕರ ಬೇಡಿಕೆಗೆ ‘ಯುವಿಸಿಇ’ ಕಂಗಾಲು

ಸೆಂಚುರಿ ಕ್ಲಬ್‌ ಸದಸ್ಯತ್ವ, ‘ಬ್ಯುಸಿನೆಸ್ ಕ್ಲಾಸ್’ ವಿಮಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 18:13 IST
Last Updated 7 ಫೆಬ್ರುವರಿ 2024, 18:13 IST
ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು
ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು   

ಬೆಂಗಳೂರು: ‘ಸೆಂಚುರಿ ಕ್ಲಬ್‌ ಸದಸ್ಯತ್ವ, ಓಡಾಟಕ್ಕೆ ‘ಬ್ಯುಸಿನೆಸ್ ಕ್ಲಾಸ್’ ವಿಮಾನಗಳ ವ್ಯವಸ್ಥೆ ಮಾಡಬೇಕು. ಮನೆ ಕೆಲಸದವರನ್ನು ನೇಮಿಸಬೇಕು . . .’

–ಇದು ಸ್ವಾಯತ್ತ ವಿಶ್ವವಿದ್ಯಾಲಯವಾದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನ (ಯುವಿಸಿಇ) ನಿರ್ದೇಶಕ ಸ್ಥಾನಕ್ಕೆ ನೇಮಕವಾಗಿರುವ ಬಾಂಬೆ ಐಐಟಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಿ. ಮಂಜುನಾಥ್ ಅವರ ಬೇಡಿಕೆಯ ಪಟ್ಟಿ.

ರಾಜ್ಯ ಸರ್ಕಾರ ಮಂಜುನಾಥ್‌ ಅವರನ್ನು 2023ರ ಮಾರ್ಚ್‌ನಲ್ಲೇ ಯುವಿಸಿಇ ನಿರ್ದೇಶಕರನ್ನಾಗಿ ಆಯ್ಕೆ ಮಾಡಿತ್ತು. ಆದರೆ, ಅವರು ಸ್ಥಾನದ ಜವಾಬ್ದಾರಿ ವಹಿಸಿಕೊಂಡಿರಲಿಲ್ಲ. ಹೆಚ್ಚುವರಿ ಸಮಯ ಕೇಳುತ್ತಲೇ ಬಂದಿದ್ದರು. ಅವರಿಗೆ ನೀಡಿದ್ದ ಸಮಯಾವಕಾಶದಂತೆ ಇದೇ ವರ್ಷದ ಜ.31ಕ್ಕೆ ಅವರು ಅಧಿಕಾರ ಸ್ವೀಕರಿಸಬೇಕಿತ್ತು. ಈಗ ಯುವಿಸಿಇ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಅವರು, ಅಧಿಕಾರ ವಹಿಸಿಕೊಳ್ಳಬೇಕಾದರೆ ಸಂಬಳದ ಪ್ಯಾಕೇಜ್‌ ಜತೆಗೆ ಕೆಲ ಷರತ್ತುಗಳನ್ನೂ ಪೂರೈಸುವಂತೆ, ಅದಕ್ಕೆ ಅಗತ್ಯವಾದ ಭತ್ಯೆ ನಿಗದಿ ಮಾಡುವಂತೆ ಕೋರಿದ್ದಾರೆ. ‘ಇಲ್ಲದಿದ್ದರೆ ತಮ್ಮ ಬಳಿ ಇತರೆ ಸರ್ಕಾರಿ ಸಂಸ್ಥೆಗಳಿಂದ ಆಹ್ವಾನವಿದ್ದು, ಯುವಿಸಿಇ ಜವಾಬ್ದಾರಿ ವಹಿಸಿಕೊಳ್ಳುವ ಕುರಿತು ಪರಿಶೀಲಿಸಬೇಕಾಗುತ್ತದೆ. ಯಾವುದಕ್ಕೂ ಪ್ರತಿಕ್ರಿಯಿಸಿ’ ಎಂದಿದ್ದಾರೆ.

ADVERTISEMENT

‘ಮಂಜುನಾಥ್‌ ಅವರ ಬೇಡಿಕೆ ಸಹಜವಾಗಿಯೇ ಇವೆ. ಐಐಟಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಅವರನ್ನು ತೆಗದುಕೊಂಡರೆ ಎಂಜಿನಿಯರಿಂಗ್‌ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅವಕಾಶವಾಗಲಿದೆ. ಆದರೆ, ಕೆಲವು ಬೇಡಿಕೆ ಈಡೇರಿಕೆಗೆ ಸರ್ಕಾರದ ಅನುಮತಿ ಅಗತ್ಯವಿದೆ. ಒಂದು ವೇಳೆ ಬೇಡಿಕೆಗೆ ಅನುಮತಿ ದೊರೆತರೆ ಸಂಸ್ಥೆಯ ಇತರರ ಬೇಡಿಕೆಗಳನ್ನೂ ಪರಿಶೀಲಿಸಬೇಕಾಗುತ್ತದೆ’ ಎನ್ನುತ್ತಾರೆ ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಬಿ. ಮುತ್ತುರಾಮನ್. 

‘ನಿರ್ದೇಶಕರ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಪ್ರಗತಿಯ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಇವನ್ನೆಲ್ಲ ಸರ್ಕಾರ ಹೇಗೆ ಸಹಿಸಿಕೊಳ್ಳುತ್ತಿದೆ? ಒಂದು ಸಂಸ್ಥೆ ಒಬ್ಬ ವ್ಯಕ್ತಿಗಾಗಿ ಹೀಗೆ ಕಾಯುತ್ತಿರುವುದು ಕರ್ನಾಟಕದ ಉನ್ನತ ಶಿಕ್ಷಣದ ಇತಿಹಾಸದಲ್ಲಿ ಇದೇ ಮೊದಲು. ಆ ಮೂಲಕ ಅವರು ವಿಶ್ವೇಶ್ವರಯ್ಯ ಅವರನ್ನೂ ಅವಮಾನಿಸಿದ್ದಾರೆ’ ಎಂದು ಯುವಿಸಿಇ ನಿವೃತ್ತ ಪ್ರಾಂಶುಪಾಲ ಕೆ.ರಂಗ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.